ಮಂಗಳೂರು: ಹೆತ್ತ ಮಕ್ಕಳಿಗೆ ಕುಣಿಕೆ ಬಿಗಿದು ಆತ್ಮಹತ್ಯೆಗೆ ಶರಣಾದ ತಾಯಿ - ಓರ್ವ ಪುತ್ರಿ ಸಾವಿನಿಂದ ಪಾರು
Wednesday, March 1, 2023
ಮಂಗಳೂರು: ಮಕ್ಕಳಿಬ್ಬರಿಗೆ ಕುಣಿಕೆ ಬಿಗಿದು ತಾಯಿಯೊಬ್ಬಳು ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಮಂಗಳೂರಿನ ಕೊಡಿಯಾಲ ಗುತ್ತುವಿನಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ತಾಯಿ ಹಾಗೂ ನಾಲ್ಕು ವರ್ಷದ ಪುತ್ರಿ ಸಾವಿಗೀಡಾಗಿದ್ದಾರೆ. 12ರ ಪುತ್ರಿ ಸಾವಿನ ದವಡೆಯಿಂದ ಪಾರಾಗಿದ್ದಾಳೆ.
ನಗರದ ಕೊಡಿಯಾಲ ಗುತ್ತು ನಿವಾಸಿ ವಿಜಯಾ(33), ಶೋಭಿತಾ(4) ಸಾವನ್ನಪ್ಪಿದವರು. ಯಜ್ಞಾ(12) ಎಂಬಾಕೆ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ವಿಜಯಾ ಅವರಿಗೆ ಎರಡು ವಿವಾಹವಾಗಿತ್ತು. ಆದರೆ ಮೊದಲ ಪತಿ ಮೃತಪಟ್ಟಿದ್ದರು. ಆ ಬಳಿಕ ಆರೇಳು ವರ್ಷದ ಹಿಂದೆ ವಿಜಯ ಅವರಿಗೆ ಎರಡನೇ ವಿವಾಹವಾಗಿತ್ತು. ಆದರೆ ಕೆಲ ತಿಂಗಳ ಹಿಂದೆ ಎರಡನೇ ಪತಿಯೂ ಮೃತಪಟ್ಟಿದ್ದಾರೆ. ನೇಣಿನಿಂದ ಪಾರಾದ ಯಜ್ಞಾ ಎಂಬ ಬಾಲಕಿ ಅವರ ಮೊದಲ ಪತಿಯ ಪುತ್ರಿ.
ಇಂದು ಸಂಜೆ ವೇಳೆಗೆ ವಿಜಯಾ ತನ್ನಿಬ್ಬರು ಮಕ್ಕಳನ್ನು ನೇಣಿಗೆ ಹಾಕಿ ಬಳಿಕ ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಯಜ್ಞಾ ಎಂಬ ಪುತ್ರಿಯ ಕಾಲಡಿಗೆ ಟೇಬಲ್ ಸ್ಪರ್ಶವಾಗಿದೆ. ಪರಿಣಾಮ ಆಕೆ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಇದರಿಂದ ಆಕೆ ತನ್ನ ನೇಣು ಕುಣಿಕೆಯಿಂದ ಬಿಡಿಸಿಕೊಂಡ ಮನೆಯಿಂದ ಹೊರಬಂದು ಸ್ಥಳೀಯರಿಗೆ ವಿಚಾರ ತಿಳಿಸಿದ್ದಾಳೆ. ತಕ್ಷಣ ಸ್ಥಳೀಯರು ಸ್ಥಳಕ್ಕೆ ದೌಢಾಯಿಸಿ ನೋಡಿದಾಗ ವಿಜಯಾ ಹಾಗೂ ಶೋಭಿತಾ ಮೃತಪಟ್ಟಿದ್ದರು. ಈ ಬಗ್ಗೆ ಬರ್ಕೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಾಗಿದೆ. ಈ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.