ಮಂಗಳೂರು: ಕರ್ತವ್ಯಲೋಪ ಎಸಗಿದ ಮಹಿಳಾ ಪೊಲೀಸ್ ಸಿಬ್ಬಂದಿ ಅಮಾನತು - ನೂತನ ಪೊಲೀಸ್ ಕಮಿಷನರ್ ಖಡಕ್ ಆದೇಶ
Thursday, March 2, 2023
ಮಂಗಳೂರು: ಪೊಲೀಸ್ ಅಧಿಕಾರಿ, ಸಿಬ್ಬಂದಿಯಿಂದ ಭ್ರಷ್ಟಾಚಾರ ಸಹಿಸಲು ಸಾಧ್ಯವಿಲ್ಲ ಎಂದು ಅಧಿಕಾರ ವಹಿಸಿಕೊಂಡ ದಿನವೇ ಮಂಗಳೂರು ನೂತನ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ಹೇಳಿಕೆ ನೀಡಿದ್ದರು. ಅದರಂತೆ ಇದೀಗ ಮೊದಲ ತಲೆದಂಡವಾಗಿದೆ. ಕರ್ತವ್ಯ ಲೋಪ ಎಸಗಿರುವ ಆರೋಪದಲ್ಲಿ ಪಾಂಡೇಶ್ವರ ಠಾಣೆಯ ಎಎಸ್ಐಯನ್ನು ಪೊಲೀಸ್ ಕಮಿಷನರ್ ಸಸ್ಪೆಂಡ್ ಮಾಡಿದ್ದಾರೆ.
ದಂಪತಿ ಜಗಳ ಪ್ರಕರಣದಲ್ಲಿ ವ್ಯವಹಾರ ಕುದುರಿಸಿದ್ದ ಪಾಂಡೇಶ್ವರ ಠಾಣೆಯ ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ಅಮಾನತು ಆಗಿದ್ದಾರೆ.
ಶ್ರೀಲತಾ ಸಂಧಾನದ ನೆಪದಲ್ಲಿ ದೂರುದಾರೆ ಮಹಿಳೆಯ ಪತಿಯ ಕಾರಿನಲ್ಲಿಯೇ ಕುಳಿತು ಡೀಲ್ ಮಾಡಿದ್ದರು. ಇದನ್ನು ಸಂತ್ರಸ್ತೆ ಗಮನಿಸಿ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದರು. ಇದೇ ವಿಚಾರಕ್ಕೆ ದೂರುದಾರ ಹಾಗೂ ಶ್ರೀಲತಾ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಶ್ರೀಲತಾ ದೂರುದಾರೆಯ ವಿರುದ್ಧವೇ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿದ್ದರು. ಆದ್ದರಿಂದ ಹಣ ಪಡೆದು ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಶ್ರೀಲತಾ ವಿರುದ್ಧ ಸಂತ್ರಸ್ತೆ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದರು. ಕರ್ತವ್ಯ ಲೋಪ ಎಸಗಿರುವ ಆರೋಪ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಎಎಸ್ಐಯನ್ನು ಸಸ್ಪೆಂಡ್ ಮಾಡಿ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಆದೇಶಿಸಿದ್ದಾರೆ.
ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ಈ ಹಿಂದೆ ಹಾಸನದಲ್ಲಿ ರೇವ್ ಪಾರ್ಟಿ ಮಾಡಿ ಸಿಕ್ಕಿಬಿದ್ದಿದ್ದರು. ಈ ರೇವ್ ಪಾರ್ಟಿಯನ್ನು ಶ್ರೀಲತಾ ಪುತ್ರ ಅತುಲ್ ಆಯೋಜಿಸಿದ್ದನು. ಅಂದಿನ ಹಾಸನ ಎಸ್ಪಿ ಶ್ರೀನಿವಾಸ ಗೌಡ ದಾಳಿ ನಡೆಸಿದಾಗ ನೂರಕ್ಕಿಂತಲೂ ಅಧಿಕ ಯುವಕ - ಯುವತಿಯರೊಂದಿಗೆ ಶ್ರೀಲತಾ ಸಿಕ್ಕಿಬಿದ್ದು ಅಮಾನತಾಗಿದ್ದರು.