ಮಂಗಳೂರು: ಪೊಲೀಸ್ ಎಂದು ಬೆದರಿಸಿ ಮಹಿಳೆಯ ಹಣ ಸುಲಿಗೆ ಮಾಡಿದ ಖದೀಮ ಅರೆಸ್ಟ್
Saturday, March 11, 2023
ಮಂಗಳೂರು: ಮಸಾಜ್ ಪಾರ್ಲರ್ ನಡೆಸುತ್ತಿದ್ದ ಮಹಿಳೆಯೋರ್ವರನ್ನು ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದಲ್ಲಿ ಖದೀಮನೋರ್ವನನ್ನು ಕಾವೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಾವೂರಿನ ಈಶ್ವರ ನಗರ ನಿವಾಸಿ ಶಿವರಾಜ್ ಬಂಧಿತ ಆರೋಪಿ.
ಸವಿತಾ (45) ಎಂಬವರು ಮಸಾಜ್ ಪಾರ್ಲರ್ ನಡೆಸುತ್ತಿದ್ದರು. ಆಕೆಗೆ ತಾನು ಪೊಲೀಸ್ ಎಂದು ಪರಿಚಯಿಸಿದ ಶಿವರಾಜ್ ಮಸಾಜ್ ಪಾರ್ಲರ್ ನಡೆಸುವುದಕ್ಕೆ ಹಾಗೂ ಗಳಿಕೆಗಿಂತ ಅಧಿಕ ನಗ-ನಗದು ಹೊಂದಿರುವ ಬಗ್ಗೆ ತಮ್ಮ ವಿರುದ್ಧ ದೂರು ಬಂದಿದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಹಣ ಕೊಡಬೇಕು ಇಲ್ಲದಿದ್ದರೆ ದಾಳಿ ಮಾಡುವುದಾಗಿ ಬೆದರಿಸಿದ್ದಾನೆ. ಆದ್ದರಿಂದ ಮಹಿಳೆ ಆತನಿಗೆ 38,000 ಹಣ ನೀಡಿದ್ದಾರೆ.
ಆ ಬಳಿಕ ಆಕೆ ಬೆದರಿಕೆ ಹಾಕಿ ಮೋಸ ಮಾಡಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.