ಮಂಗಳೂರು: ಗೀತಾ ಲಕ್ಷ್ಮೀಶ್ 'ಪೆರ್ಗದ ಸಿರಿ' ಕವನ ಸಂಕಲನ ಅನಾವರಣ
Sunday, March 19, 2023
ಮಂಗಳೂರು: ತುಳು ಭಾಷೆಯಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿರುವ ಕೆದಂಬಾಡಿ ಜತ್ತಪ್ಪ ರೈ, ಅಮೃತ ಸೋಮೇಶ್ವರ, ಡಾ.ಬಿ.ಎ.ವಿವೇಕ ರೈಗಳಂತಹ ಹಿರಿಯ ಸಾಹಿತಿಗಳು ಬರವಣಿಗೆಯಿಂದ ಹಿಂದೆ ಸರಿಯುತ್ತಿರುವ ವೇಳೆಯಲ್ಲಿ ಗೀತಾ ಲಕ್ಷ್ಮೀಶರಂತಹ ಕಿರಿಯರು ಸಾಧನೆ ಮಾಡುತ್ತಿರುವುದನ್ನು ಗಮನಿಸಿದಾಗ ಬರವಣಿಗೆಯ ಅಂಗಣದಲ್ಲಿ ಹೊಸ ಚಿಗುರು ಹುಟ್ಟುತ್ತಿದೆ ಎಂದು ಭಾಸವಾಗುತ್ತಿದೆ ಎಂದು ತುಳು ಜನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಹೇಳಿದರು.
ನಗರದ ಕೆನರಾ ಕಾಲೇಜಿನ ಸಭಾಂಗಣದಲ್ಲಿ ಗೀತಾ ಲಕ್ಷ್ಮೀಶ್ ಅವರ ತುಳು ಹಾಗೂ ಕನ್ನಡ ಲಿಪಿಯಲ್ಲಿರುವ 'ಪೆರ್ಗದ ಸಿರಿ' ಕವನ ಸಂಕಲನವನ್ನು ಅನಾವರಣ ಮಾಡಿ ಮಾತನಾಡಿದ ಅವರು, ತುಳುಲಿಪಿಯನ್ನು ಕಲಿತು, ಆಸಕ್ತರಿಗೆ ಆ ಲಿಪಿಯನ್ನು ಕಲಿಸುತ್ತಾ, ತಾನು ಬರೆದ ಕವನಗಳನ್ನು ತುಳು ಹಾಗೂ ಕನ್ನಡ ಲಿಪಿಯಲ್ಲಿ ಸಾಹಿತಿ ಗೀತಾ ಲಕ್ಷ್ಮೀಶ್ ಪ್ರಕಟಿಸಿದ್ದಾರೆ. ಇದರ ಪ್ರಯೋಜನಗಳೆಂದರೆ ಒಂದೆಡೆ ಲಿಪಿ ಕಲಿಯಲು ಸುಲಭವಾದರೆ ಮತ್ತೊಂದೆಡೆ ಕವನಗಳನ್ನು ತುಳುವಿನಲ್ಲಿ ಅರ್ಥ ಮಾಡಲು ಸುಲಭವಾಗುತ್ತದೆ ಎಂದು ಹೇಳಿದರು.
ಈ ಕವನ ಸಂಕಲನದಲ್ಲಿ ನೋವು, ನಲಿವು, ಬೆವರು, ನಗು, ಮಣ್ಣಿನ ವಾಸನೆ, ಕುಟುಂಬದ ಒಡನಾಟ, ಅವಿಭಕ್ತ ಕುಟುಂಬದ ವಿಚಾರಗಳ ಚಿತ್ರಣವಿದೆ. 20 ಹನಿಕವಿತೆಗಳಿವೆ. ಈ ಹನಿಗವಿತೆಗಳಲ್ಲಿ ಒಂದು ರೀತಿಯ ದನಿಯಿದೆ, ಶಬ್ದವಿದೆ ಎಂದು ಡಾ.ಗಣೇಶ ಅಮೀನ್ ಸಂಕಮಾರ್ ಹೇಳಿದರು.
ಈ ಸಂದರ್ಭ ಯುನಿವರ್ಸಿಟಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಮಾಧವ ಎಂ.ಕೆ.ಯವರು 'ತುಳುವರ ಕಲ' ಕೂಟವನ್ನು ಉದ್ಘಾಟಿಸಿದರು. ಎಂಆರ್ ಪಿಎಲ್ ನ ಮಹಾಪ್ರಬಂಧಕಿ ವೀಣಾ ಟಿ. ಶೆಟ್ಟಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.