![ಮಂಗಳೂರು:ಮಂಗಳೂರಿನ ಜ್ಯುವೆಲ್ಲರಿ ಉದ್ಯೋಗಿ ಹತ್ಯೆ ಪ್ರಕರಣ ;ಕೇರಳದ ಕಾಸರಗೋಡಿನಲ್ಲಿ ಆರೋಪಿಯ ಬಂಧನ ಮಂಗಳೂರು:ಮಂಗಳೂರಿನ ಜ್ಯುವೆಲ್ಲರಿ ಉದ್ಯೋಗಿ ಹತ್ಯೆ ಪ್ರಕರಣ ;ಕೇರಳದ ಕಾಸರಗೋಡಿನಲ್ಲಿ ಆರೋಪಿಯ ಬಂಧನ](https://blogger.googleusercontent.com/img/b/R29vZ2xl/AVvXsEjRiqvmJSQbOj2eWAgDwUGzVpcHP72Gsl_eZOkxaCOc0HewxkYW_YOgdW-Kh-h61hywsAvSrV981CpS_nI2hMCKTHIp84Ib-MNDMM1JhFjeKt0lWW1dvamJkyMyaHteJNzMqpI8FFO1NKY/s1600/1677803029214907-0.png)
ಮಂಗಳೂರು:ಮಂಗಳೂರಿನ ಜ್ಯುವೆಲ್ಲರಿ ಉದ್ಯೋಗಿ ಹತ್ಯೆ ಪ್ರಕರಣ ;ಕೇರಳದ ಕಾಸರಗೋಡಿನಲ್ಲಿ ಆರೋಪಿಯ ಬಂಧನ
Thursday, March 2, 2023
ಮಂಗಳೂರು: ಒಂದು ತಿಂಗಳ ಹಿಂದೆ ನಗರದ ಮಿಲಾಗ್ರಿಸ್ ಬಳಿ ಜುವೆಲ್ಲರಿ ಉದ್ಯೋಗಿಯನ್ನು ಕತ್ತು ಸೀಳಿ ಹತ್ಯೆಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾಸರಗೋಡು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಲ್ಲಿಕೋಟೆಯ ಕೊಯಿಲಾಂಡಿ ನಿವಾಸಿ ಶಿಫಾಸ್ (33) ಬಂಧಿತ ಆರೋಪಿ. ಗುರುವಾರ ಮಧ್ಯಾಹ್ನ ಕ್ಯಾಲಿಕಟ್ ನಿಂದ ರೈಲಿನಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ಬಂದಿದ್ದ ಶಿಫಾಸ್, ಕಾಸರಗೋಡು ನಗರದ ಮಲ್ಲಿಕಾರ್ಜುನ ದೇವಸ್ಥಾನದ ಆವರಣಕ್ಕೆ ಬಂದಾಗ ಕಾಸರಗೋಡು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಸರಗೋಡು ಡಿವೈಎಸ್ಪಿ ಸುಧಾಕರನ್ ಮತ್ತು ಡಿಸಿ ಆರ್ ಬಿ ಡಿವೈಎಸ್ಪಿ ಅಬ್ದುಲ್ ರಹೀಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಫೆಬ್ರವರಿ 3ರಂದು ಮಂಗಳೂರಿನಲ್ಲಿ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ರಾಘವ ಆಚಾರ್ಯ ಎಂಬವರನ್ನು ಹತ್ಯೆಗೈದಿದ್ದ ಆಗಂತುಕ ವ್ಯಕ್ತಿ ಆನಂತರ ಯಾರ ಕೈಗೂ ಸಿಗದೆ ತಲೆಮರೆಸಿಕೊಂಡಿದ್ದ. ಆರೋಪಿ ಪತ್ತೆಗಾಗಿ ಸಿಸಿಟಿವಿಯಲ್ಲಿ ದೊರೆತ ಫೋಟೊಗಳನ್ನು ಮಂಗಳೂರು ಪೊಲೀಸರು ಬಿಡುಗಡೆ ಮಾಡಿದ್ದರು. ಮುಖಕ್ಕೆ ಮಾಸ್ಕ್ ತಲೆಗೆ ಟೋಪಿ ಹಾಕಿ ಪರಾರಿಯಾಗಿದ್ದ ಆರೋಪಿಯ ಚಹರೆಯನ್ನು ಪೊಲೀಸರು ನೋಟೀಸ್ ಮೂಲಕ ವಿವಿಧ ಕಡೆಗಳಲ್ಲಿ ಅಂಟಿಸಿದ್ದರು. ಆರೋಪಿ ಮಾಹಿತಿ ಸಿಕ್ಕಲ್ಲಿ ಪೊಲೀಸರಿಗೆ ನೀಡುವಂತೆ ಕೇಳಿಕೊಂಡಿದ್ದರು.
ತಿಂಗಳ ಕಾಲವೂ ತಲೆಮರೆಸಿಕೊಂಡಿದ್ದ ಆರೋಪಿ ಇದೀಗ ಅಚಾನಕ್ಕಾಗಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಆದರೆ ಯಾಕಾಗಿ ಈ ಕೃತ್ಯ ನಡೆಸಿದ್ದಾನೆ ಎನ್ನೋದು ಭಾರೀ ಕುತೂಹಲ ಸೃಷ್ಟಿಸಿದೆ. ಮಂಗಳೂರು ಪೊಲೀಸರು ಇನ್ನಷ್ಟೇ ಆತನನ್ನು ವಶಕ್ಕೆ ಪಡೆಯಬೇಕಷ್ಟೆ.