ಮಂಗಳೂರು: ಶ್ರೀ ಮಂಗಳಾದೇವಿಗೆ ಲಕ್ಷಕ್ಕೂ ಅಧಿಕ ಮಲ್ಲಿಗೆ ಚೆಂಡಿನಲ್ಲಿ ಶಯನೋತ್ಸವ ಸೇವೆ.
Thursday, March 16, 2023
ಮಂಗಳೂರು: ನಗರದ ಶ್ರೀ ಮಂಗಳಾದೇವಿಯ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ವೈಭವದ ಶಯನೋತ್ಸವಕ್ಕೆ ಒಂದು ಲಕ್ಷಕ್ಕೂ ಅಧಿಕ ಮಲ್ಲಿಗೆ ಚೆಂಡು ಸಮರ್ಪಣೆಯಾಯಿತು.
ಶ್ರೀ ಮಂಗಳಾದೇವಿಯ ವರ್ಷಾವಧಿ ಜಾತ್ರೆಯ ಐದನೆಯ ದಿನ ಉತ್ಸವದ ಪ್ರಯುಕ್ತ ರಥ ಸವಾರಿ, ಬಲಿ ಉತ್ಸವಾದಿಗಳು ನಡೆಯಿತು. ಬಳಿಕ ಮಹಾಪೂಜೆ ನಡೆದು ಕವಾಟ ಬಂಧನದ ಬಳಿಕ ಶಯನೋತ್ಸವವು ಪ್ರಾರಂಭವಾಯಿತು. ಈ ಶಯನೋತ್ಸವಕ್ಕೆ ಸಾಯಂಕಾಲ 4 ಗಂಟೆಯಿಂದಲೇ ಭಕ್ತಾದಿಗಳು ದೇವಿಯ ಶಯನೋತ್ಸವಕ್ಕಾಗಿ ಮಲ್ಲಿಗೆಯನ್ನು ಸಮರ್ಪಿಸಿದ್ದಾರೆ. ಬಳಿಕ ಸುಮಾರು ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ಮಲ್ಲಿಗೆ ಚೆಂಡಿನ ರಾಶಿಯಲ್ಲಿ ಶ್ರೀದೇವಿಯ ಶಯನೋತ್ಸವ ಸೇವೆ ನಡೆಯಿತು.
ಈ ಮೂಲಕ ದೇವಿಯು ತನ್ನ ಆಲಯದಲ್ಲಿ ಮಲ್ಲಿಗೆಯಿಂದ ತುಂಬಿದ ತಲ್ಪದ ಸುಪ್ಪತ್ತಿಗೆಯಲ್ಲಿ ಏಕಾಂತ ಸ್ಥಿತಿಯಲ್ಲಿ ಸುಖ ನಿದ್ದೆಗೆ ಜಾರುತ್ತಾಳೆ ಎಂಬುದು ಅನಾದಿ ಕಾಲದಿಂದ ಬಂದ ನಂಬಿಕೆ. ಅದೇ ಪ್ರಕಾರ ಪೂರ್ವ ಶಿಷ್ಟ ಸಂಪ್ರದಾಯದಂತೆ ಗರ್ಭಗೃಹದ ಕವಾಟ ಬಂಧನವು ನೆರವೇರಿ ಅಮ್ಮನಿಗೆ ಶಯನ ವೈಭೋಗ ನೆರವೇರಿತು.