ಮಂಗಳೂರು: ಪೊಳಲಿಯ ಪ್ರಸಾದ ಕಲ್ಲಂಗಡಿ - ರಕ್ತಬೀಜಾಸುರನ ಸಂಕೇತ ಈ ಹಣ್ಣು
Saturday, April 8, 2023
ಮಂಗಳೂರು: ಬೇಸಿಗೆಯ ಧಗೆಗೆ ತಿನ್ನಲು ಕಲ್ಲಂಗಡಿ ಹಣ್ಣು, ಕಲ್ಲಂಗಡಿ ಜ್ಯೂಸ್ ದೊರಕಿದರೆ ಆಹಾ ಅದೆಷ್ಟು ಖುಷಿಯಾಗುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಪುರಾತನ ದೇವಸ್ಥಾನ ಪೊಳಲಿ ಕ್ಷೇತ್ರದಲ್ಲಿ ಕಲ್ಲಂಗಡಿ ಹಣ್ಣೇ ಪ್ರಸಾದವೆಂಬ ಪ್ರತೀತಿಯಿದೆ. ಇಲ್ಲಿ ಮಾರ್ಚ್ ನಿಂದ ಎಪ್ರಿಲ್ ವರೆಗೆ ನಡೆಯುವ ಒಂದು ತಿಂಗಳ ಜಾತ್ರೆಯ ವೇಳೆ ಸಂತೆಯಲ್ಲಿ ಕಲ್ಲಂಗಡಿ ಮಾರಾಟವಾಗುತ್ತದೆ. ಅದನ್ನು ಭಕ್ತರು ಪೊಳಲಿಯ ಪ್ರಸಾದವೆಂದೇ ಎಷ್ಟು ಹಣಕೊಟ್ಟಾದರೂ ಖರೀದಿಸುತ್ತಾರೆ.
ಇಲ್ಲಿನ ಕಲ್ಲಂಗಡಿ ಹಣ್ಣನ್ನು ಪುರಾಣದ ರಕ್ತಬೀಜಾಸುರನೆಂದೇ ನಂಬಲಾಗುತ್ತದೆ. ಅದರೊಳಗಿನ ಕೆಂಪು ತಿರುಳು ರಾಕ್ಷಸನ ರಕ್ತವನ್ನು ಸಂಕೇತಿಸಿದರೆ ಅದರೊಳಗಿನ ಬೀಜಗಳು ಬೀಜಾಸುರಾದಿಗಳನ್ನು ಸಂಕೇತಿಸುತ್ತದೆ. ಪೊಳಲಿ ಹಾಗೂ ಮಳಲಿ ಭಾಗದಲ್ಲಿ ಬೆಳೆಸಲಾಗುವ ಕಲ್ಲಂಗಡಿ ಹಣ್ಣುಗಳನ್ನು ಮಾತ್ರ ಇಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ಕೃಷಿಕರೇ ಈ ಹಣ್ಣು ಬೆಳೆದು ಮಾರಾಟ ಮಾಡುತ್ತಾರೆ. ಇವರು ವೃತ್ತಿಪರ ಕೃಷಿಕರಲ್ಲ, ಇದು ಅವರ ಹವ್ಯಾಸವಷ್ಟೇ. ಹೊರಗಿನ ಕೃಷಿಕರು ವ್ಯಾಪಾರಕ್ಕೆ ಬಂದರೆ ಆ ಕಲ್ಲಂಗಡಿ ಮಾರಾಟವಾಗುವುದೂ ಇಲ್ಲ. ಏಕೆಂದರೆ ಸ್ಥಳೀಯ ತಳಿಯ ಆಕಾರ, ಬಣ್ಣಕ್ಕಿಂತ ಇತರ ತಳಿಯ ಕಲ್ಲಂಗಡಿ ಭಿನ್ನವಾಗಿರುತ್ತದೆ. ಪೊಳಲಿಯ ಜೀವನದಿ ಫಲ್ಗುಣಿ ನದಿಯ ಸುತ್ತಮುತ್ತಲಿನ ಮರಳು ಮಣ್ಣಿನ ಕಾರಣದಿಂದಾಗಿ ಕಲ್ಲಂಗಡಿ ಬೆಳೆಯಲು ಉತ್ತಮ ಪ್ರದೇಶವಾಗಿದೆ. ಹಿಂದೆ ರಾಸಾಯನಿಕಗಳ ಬಳಕೆಯಿಲ್ಲದೆ ಬೆಳೆ ತೆಗೆಯಲಾಗುತ್ತಿತ್ತು. ಆದರೆ ಬೇಸರದ ಸಂಗತಿಯೆಂದರೆ ಪೊಳಲಿ ತಳಿಯೆಂದು ಖ್ಯಾತಿಹೊಂದಿದ್ದ ಕಲ್ಲಂಗಡಿ ತಳಿ ನಾಶವಾಗಿದ್ದು, ಈಗ ಇರೋದು ಹೈಬ್ರೀಡ್ ತಳಿಯಷ್ಟೇ.
ಪೊಳಲಿ ಜಾತ್ರೆ ಯಾವ ದಿನ ಹಾಗೂ ಕಲ್ಲಂಗಡಿ ಬೆಳೆಯುವ ಅವಧಿಯನ್ನು ಲೆಕ್ಕ ಹಾಕಿ ಡಿಸೆಂಬರ್ ಅಂತ್ಯದಿಂದ ಜನವರಿ 25ರೊಳಗೆ ಬೀಜ ಹಾಕಲಾಗುತ್ತದೆ. ಬಳ್ಳಿ ಬೆಳೆದು ಮಾರ್ಚ್ ಅಂತ್ಯಕ್ಕೆ ಕಾಯಿ ಬಲಿತು ಕಲ್ಲಂಗಡಿ ಹಣ್ಣುಗಳು ದೊರೆಯುತ್ತದೆ. ಈ ಹಣ್ಣುಗಳು ಪೊಳಲಿ ಜಾತ್ರೆಯ ವೇಳೆಗೆ ಮಾರಾಟವಾಗುತ್ತದೆ. ವಿಶೇಷವೆಂದರೆ ಪೊಳಲಿ ಜಾತ್ರೆಯ ಹೊರತಾಗಿ ಬೇರೆ ಯಾವ ಸಮಯದಲ್ಲಿ ಬೀಜ ಹಾಕಿದರೂ ಇಲ್ಲಿ ಬಳ್ಳಿ ಬೆಳೆಯೋದಿಲ್ಲ, ಕಾಯಿ ಬಿಡೋದಿಲ್ಲವಂತೆ. ಒಟ್ಟಿನಲ್ಲಿ ಧಾರ್ಮಿಕ ನಂಬಿಕೆಯೊಂದಿಗೆ ಕೃಷಿಕರು ಬೆಳೆಯುತ್ತಿರುವ ಕಲ್ಲಂಗಡಿ ಹಣ್ಣನ್ನು ಭಕ್ತರು ಪ್ರಸಾದ ರೂಪದಲ್ಲಿ ಮನೆಗೆ ಒಯ್ಯುತ್ತಿರುವುದು ಇಲ್ಲಿನ ವಿಶೇಷ.