ಮಂಗಳೂರು: ಬನ್ನಂಜೆ ರಾಜಾನ ಮೇಲಿದ್ದ ಮೂರು ಶೂಟೌಟ್ ಪ್ರಕರಣ ಖುಲಾಸೆ

ಮಂಗಳೂರು: ಬನ್ನಂಜೆ ರಾಜಾನ ಮೇಲಿದ್ದ ಮೂರು ಶೂಟೌಟ್ ಪ್ರಕರಣ ಖುಲಾಸೆ


ಮಂಗಳೂರು: ನಗರದಲ್ಲಿ ಬನ್ನಂಜೆ ರಾಜಾನ ಮೇಲೆ ದಾಖಲಾಗಿದ್ದ 3 ಶೂಟೌಟ್ ಪ್ರಕರಣಗಳನ್ನು ಖುಲಾಸೆಗೊಳಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

2000ದ ವೇಳೆ ಬಂಟ್ಸ್ ಹಾಸ್ಟೆಲ್ ನಿವಾಸಿ ಇರ್ವಿನ್ ಪಿಂಟೋ ಹಾಗೂ ಅವರ ಪತ್ನಿಗೆ ಶೂಟೌಟ್ ಮಾಡಿ ಕೊಲೆಗೆತ್ನಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಬನ್ನಂಜೆರಾಜ ಮತ್ತು ಆತನ ಸಹಚರರ ಮೇಲೆ ಪ್ರಕರಣ ದಾಖಲಾಗಿತ್ತು.

2004ರಲ್ಲಿ ರೋಹನ್ ಕಾರ್ಪೋರೇಶನ್‌ ಮಾಲಕ ರೋಹನ್ ಮೊಂತೆರೊ ಕಚೇರಿ ಮೇಲೆ ಗುಂಡು ಹಾರಿಸಿ ಕೊಲೆಗೆತ್ನಿಸಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಬನ್ನಂಜೆ ರಾಜನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 2011ರಲ್ಲಿ ಪೃಥ್ವಿ ಡೆವಲಪರ್ಸ್ ಮತ್ತು ಬಿಲ್ಡರ್ಸ್‌ ಮಾಲಕ ಸುರೇಶ ಭಂಡಾರಿ ತಮ್ಮ ಪತ್ನಿ ಮತ್ತು ಪುತ್ರಿಯೊಂದಿಗೆ ಕದ್ರಿ ಪಾರ್ಕ್ ಬಳಿ ಕಾರಿನಲ್ಲಿದ್ದ ಸಂದರ್ಭ ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದು ರಿವಾಲ್ವರ್‌ನಿಂದ ಶೂಟೌಟ್ ಮಾಡಿ ಕೊಲೆಗೆತ್ನಿಸಿದ್ದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಮೂರೂ ಪ್ರಕರಣಗಳಲ್ಲಿ ಪೊಲೀಸರು ತನಿಖೆ ನಡೆಸಿ ಬನ್ನಂಜೆರಾಜ ಹಾಗೂ ಆತನ ಸಹಚರರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆದರೆ ಈ ಘಟನೆ ನಡೆದ ಸಂದರ್ಭ ಬನ್ನಂಜೆರಾಜ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. 2015ರಲ್ಲಿ ಆತನನ್ನು ಆಫ್ರಿಕಾದ ಮೊರಾಕೋ ದೇಶದಲ್ಲಿ ಬಂಧಿಸಿ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಆ ಬಳಿಕ ಆತನ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳಲ್ಲಿ ಪೊಲೀಸರು ಹೆಚ್ಚುವರಿ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು.

ಈ ಮೂರೂ ಪ್ರಕರಣಗಳಲ್ಲಿ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿಯವರು ಬನ್ನಂಜೆ ರಾಜನನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿ ಪರವಾಗಿ ಪಿಪಿ ಹೆಗ್ಡೆ ಅಸೋಸಿಯೇಟ್‌ನ ರಾಜೇಶ್‌ ಕುಮಾರ್ ಅಮ್ಟಾಡಿ ವಾದಿಸಿದ್ದರು. ಬನ್ನಂಜೆರಾಜನ ವಿರುದ್ಧ ನಕಲಿ ಪಾಸ್ ಪೋರ್ಟ್ ಹೊಂದಿದ್ದ ಬಗ್ಗೆ ಮತ್ತು ಇಡಿ ಪ್ರಕರಣದ ತನಿಖೆ ಬಾಕಿ ಇರುತ್ತದೆ.

Ads on article

Advertise in articles 1

advertising articles 2

Advertise under the article