ಮಂಗಳೂರು: ಸ್ಕ್ಯೂಬಾ ಡೈವಿಂಗ್ ಮಾಡುತ್ತಿದ್ದಾಗ ಕುಡ್ಲದ ಯುವತಿ ಥೈಲ್ಯಾಂಡ್ ನಲ್ಲಿ ಮೃತ್ಯು
Tuesday, April 11, 2023
ಮಂಗಳೂರು: ಥೈಲ್ಯಾಂಡ್ ನಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡುತ್ತಿದ್ದ ವೇಳೆ ಮಂಗಳೂರಿನ ಯುವತಿಯೋರ್ವರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
"ಬೇಕಿಂಗ್ ಕಂಪನಿ" ರೆಸ್ಟೋರೆಂಟ್ ಮಾಲಕಿ ಒಶಿನ್ ಪಿರೇರಾ(28) ಮೃತಪಟ್ಟ ಯುವತಿ.
ಒಶಿನ್ ಪಿರೆರಾ ರಜೆಯ ಸಂದರ್ಭದಲ್ಲಿ ಥೈಲ್ಯಾಂಡ್ ಪ್ರವಾಸದಲ್ಲಿದ್ದರು. ಈ ವೇಳೆ ಅವರು ಸ್ಕ್ಯೂಬಾ ಡೈವಿಂಗ್ ಮಾಡುತ್ತಿದ್ದಾಗ ಅವರು ಮೃತಪಟ್ಟಿದ್ದಾರೆ. ಅವರು ನಗರದ ಸೈಂಟ್ ಆ್ಯಗ್ನೇಸ್ ಕಾಲೇಜು ಬಳಿಯಿರುವ ಮಂಗಳೂರು ಬೇಕಿಂಗ್ ಕಂಪೆನಿ ರೆಸ್ಟೋರೆಂಟ್ ನ ಮಾಲಕಿಯಾಗಿದ್ದರು. ಇವರು ನಗರದ ಗೋರಿಗುಡ್ಡೆಯಲ್ಲಿರುವ ಹಿಲ್ ಸ್ಟಿಕ್ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿದ್ದರು.
ಮೃತ ಒಶಿನ್ ಪಿರೇರಾ ದಿ.ಆಸ್ಕರ್ ಪಿರೇರಾ ಮತ್ತು ಒಲಿವಿಯಾ ಪಿರೇರಾರವರ ಪುತ್ರಿಯಾಗಿದ್ದಾರೆ. ಮೃತರು, ತಾಯಿ, ಸಹೋದರ ಓಸ್ಬೋರ್ನ್ ಪಿರೇರಾ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪುತ್ರಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಾಯಿ ಒಲಿವಿಯಾ ಪಿರೇರಾ ಸಂಬಂಧಿಕರೊಂದಿಗೆ ಥೈಲ್ಯಾಂಡ್ ಗೆ ತೆರಳಿದ್ದಾರೆ.