ಮಂಗಳೂರು: ಒಂದು ಮಳೆ ಬಂದರೆ ಕಾವೇರಿ ಹೋರಾಟ ತಣ್ಣಗೆ - ವೀರಪ್ಪ ಮೊಯ್ಲಿ ಬಾಲಿಶ ಹೇಳಿಕೆ
Saturday, September 23, 2023
ಮಂಗಳೂರು: ಕಾವೇರಿ ನೀರಿಗಾಗಿ ರಾಜ್ಯದಲ್ಲಿ ಹೋರಾಟ ವಿಚಾರದಲ್ಲಿ ಬಾಲಿಶ ಹೇಳಿಕೆ ನೀಡಿದ ವೀರಪ್ಪ ಮೊಯ್ಲಿಯವರು ಒಂದು ಮಳೆ ಬಂದರೆ ಕಾವೇರಿ ವಿಚಾರ ತಣ್ಣಗಾಗುತ್ತದೆ ಎಂದು ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈಗ ನಮ್ಮ ಸರ್ಕಾರ ಇರುವಾಗ ವಿರೋಧ ಮಾಡಲು ಆಗಲ್ಲ. ನಮ್ಮ ಸರ್ಕಾರ ಕೋರ್ಟ್ ಮೂಲಕ ಸಮಸ್ಯೆ ಸರಿ ಮಾಡಲು ಯತ್ನಿಸುತ್ತದೆ. ಬಿಜೆಪಿಯವರು ಈಗ ವಿರೋಧ ಪಕ್ಷದಲ್ಲಿ ಇದ್ದು ವಿರೋಧಿಸುತ್ತಿದ್ದಾರೆ. ಕರ್ನಾಟಕ ಕಾವೇರಿ ವಿಚಾರದಲ್ಲಿ ಸೋಲಲು ಅನೇಕ ಕಾರಣಗಳಿವೆ. ನಾವು ಕಾವೇರಿ ನೀರನ್ನು ಗರಿಷ್ಠವಾಗಿ ಉಪಯೋಗ ಮಾಡಿಲ್ಲ. ಆ ಕಾಲದ ಆಡಳಿತಗಾರರು ಮಾಡಿದ ತಪ್ಪಿನಿಂದ ಹೀಗಾಗ್ತಿದೆ. ಯಗಚಿ ಅಣೆಕಟ್ಟು ಮಾಡೋದನ್ನೂ ಅನೇಕರು ತಡೆದಿದ್ದರು. ಇದರಿಂದ ನಮಗೆ ಸಿಗಬೇಕಾದ ನೀರಿನ ಪಾಲು ಸಿಗಲಿಲ್ಲ ಎಂದರು.
ಎತ್ತಿನಹೊಳೆ ಯೋಜನೆ ಮುಗಿದ ಅಧ್ಯಾಯ. ಹಳೆಯ ವಿಚಾರವನ್ನು ಮತ್ತೆ ಮತ್ತೆ ಕೇಳಬೇಡಿ ಎಂದ ವೀರಪ್ಪ ಮೊಯ್ಲಿಯವರನ್ನು ಪತ್ರಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.
ಎತ್ತಿನಹೊಳೆ ಯೋಜನೆಯನ್ನು ತರಾತುರಿಯಲ್ಲಿ ಮಾಡಿದ್ರಲ್ಲಾ. 20 ಸಾವಿರ ಕೋಟಿ ವ್ಯಯಿಸಿದರೂ ಒಂದು ಹನಿ ನೀರು ಹರಿಸಲು ಆಗಿಲ್ಲ ಯಾಕೆ ಎಂಬ ಪತ್ರಕರ್ತರ ಪ್ರಶ್ನೆಗೆ ಮೊಯ್ಲಿಯವರು, ಅದಕ್ಕೆ ನಾನು ಎಲ್ಲಿ ಬೇಕೋ ಅಲ್ಲಿ ಉತ್ತರ ಕೊಡುತ್ತೇನೆ ಎಂದು ಮೌನಕ್ಕೆ ಜಾರಿದ್ದಾರೆ. ನೀವು ಚಿಕ್ಕಬಳ್ಳಾಪುರದಲ್ಲಿ ಮತ್ತೆ ಸ್ಪರ್ಧಿಸುತ್ತೀರಲ್ಲಾ, ಅಲ್ಲಿನ ಜನರಿಗೂ ಉತ್ತರ ಕೊಡಿ ಎಂಬ ಪ್ರಶ್ನೆಗೆ ಅವಾಗಲೇ ಉತ್ತರ ಕೊಡುತ್ತೇನೆಂದು ಪ್ರಶ್ನೆಗೆ ಉತ್ತರಿಸಲಾಗದೆ ತತ್ತರಿಸಿ ಹೋದರು.