ರಾಜ್ಯ ಮಟ್ಟದ ಸ್ಕೇಟಿಂಗ್ | ಅನಘಾ ರಾಜೇಶ್, ಆರ್ನಾ ರಾಜೇಶ್ ಪದಕ ಸಾಧನೆ
Wednesday, October 4, 2023
ಮಂಗಳೂರು: ಕರ್ನಾಟಕ ರಾಜ್ಯ 4ನೇ ರ‌್ಯಾಂಕಿಂಗ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿನಿಯರಾದ ಆರ್ನಾ ರಾಜೇಶ್ ಹಾಗೂ ಅನಘಾ ರಾಜೇಶ್ ಅಮೋಘ ಸಾಧನೆ ಮೆರೆದಿದ್ದಾರೆ. ಸೆಪ್ಟಂಬರ್ 29 ರಿಂದ ಅಕ್ಟೋಬರ್ 2 ರವರೆಗೆ ಮೈಸೂರಿನಲ್ಲಿ ನಡೆದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಈ ಇಬ್ಬರು ಸಹೋದರಿಯರು ಪದಕ ಸಾಧನೆಗೈದು ಮಿಂಚಿದ್ದಾರೆ.
7-9 ವಯೋಮಿತಿ ವಿಭಾಗದಲ್ಲಿ ಆರ್ನಾ ರಾಜೇಶ್ ಅವರು ಒನ್ ರೋಡ್ ಲ್ಯಾಪ್ ಹಾಗೂ 500 ಮೀಟರ್ ರಿಂಕ್ ರೇಸ್ ನಲ್ಲಿ 2 ಬೆಳ್ಳಿ ಮತ್ತು 1000 ಮೀಟರ್ ರಿಂಕ್ ರೇಸ್ ನಲ್ಲಿ 1 ಕಂಚು ಪದಕ ಪಡೆದಿದ್ದಾರೆ.
11-14 ರ ವಯೋಮಿತಿ ವಿಭಾಗದಲ್ಲಿ ಅನಘಾ ರಾಜೇಶ್ ಅವರು 3000 ಮೀಟರ್ ರೋಡ್ ರೇಸ್ ನಲ್ಲಿ ಒಂದು ಚಿನ್ನ ಹಾಗೂ 5000 ಮೀಟರ್ ರಿಂಕ್ ಎಲಿಮಿನೇಶನ್, 1000 ಮೀಟರ್ ರಿಂಕ್ ರೇಸ್ ನಲ್ಲಿ 2 ಬೆಳ್ಳಿ ಮತ್ತು ಒನ್ ಲ್ಯಾಪ್ ರೋಡ್ ರೇಸ್ ನಲ್ಲಿ ಒಂದು ಕಂಚು ಪದಕಗಳನ್ನು ಪಡೆದಿದ್ದಾರೆ.
ಆರ್ನಾ ರಾಜೇಶ್ ಬಿಜೈ ಸೆಂಟ್ರಲ್ ಸ್ಕೂಲ್ ನ 3 ನೇ ತರಗತಿ ಹಾಗೂ ಅನಘಾ ರಾಜೇಶ್ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. ಈ ಇಬ್ಬರು ಸಹೋದರಿಯರು ಮಂಗಳೂರಿನ ವೈದ್ಯ ದಂಪತಿ ಡಾ. ರಾಜೇಶ್ ಹುಕ್ಕೇರಿ ಹಾಗೂ ಡಾ. ಅನಿತಾ ರಾಜೇಶ್ ಹುಕ್ಕೇರಿ ಪುತ್ರಿಯರಾಗಿದ್ದಾರೆ. ಬೆಂಗಳೂರಿನ ಸ್ಕೇಟಿಂಗ್ ತರಬೇತಿಯ ಮುಖ್ಯ ಕೋಚ್ ಪ್ರತೀಕ್ ರಾಜಾ ಹಾಗೂ ಸಹಾಯಕ ಕೋಚ್ ತೇಜಸ್ವಿನಿ ಕನ್ಬಿಲ್ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಮಂಗಳೂರಿನ ಕುಡ್ಲಾಸ್ ರೋಲರ್ಸ್ ಸ್ಕೇಟಿಂಗ್ ಕ್ಲಬ್ ಸದಸ್ಯೆಯರೂ ಆಗಿದ್ದಾರೆ.