ಕಾರ್ಕಳ: ಚಿರತೆ ದಾಳಿಯಿಂದ ಇಬ್ಬರಿಗೆ ಗಾಯ
Friday, November 24, 2023
ಕಾರ್ಕಳ: ಕೌಡೂರಿನ ಪರಿಸರದಲ್ಲಿ ನಾಲ್ವರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಗುರುವಾರ ನಡೆದಿದೆ. ಇಬ್ಬರಿಗೆ ಗಾಯವಾಗಿದೆ. ಸ್ಥಳೀಯ ನಾಗಂಟೆಲ್ ಎಂಬಲ್ಲಿ ಮನೆಗೆ ಬಂದ ಚಿರತೆ ನಾಯಿಯನ್ನು ಹಿಡಿಯಲು ಪ್ರಯತ್ನಿ ಸುತ್ತಿದ್ದ ವೇಳೆ ಮನೆಯ ಯಜಮಾನ ಸುಧೀರ್ ನಾಯ್ಕ ನಾಯಿಯನ್ನು ರಕ್ಷಿಸಲು ಮುಂದಾಗಿದ್ದರು. ಈ ವೇಳೆ ಚಿರತೆ ಅವರ ಮೇಲೆರಗಿ ಮುಖ ಹಾಗೂ ಕೈಗೆ ಗಾಯಗೊಳಿಸಿದೆ. ಮುಂದೆ ನಿಧೀಶ್ ಅವರ ಮೇಲೆ ಹಾರಲು ಯತ್ನಿಸಿದ್ದು ಅದೃಷ್ಟವಶಾತ್ ನಿಧೀಶ್ ಪಾರಾಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಸದಾನಂದ ಪುತ್ರನ್ ಅವರ ತಲೆ ಮೇಲೆ ಚಿರತೆ ಹಾರಿದ್ದು, ಹೆಲೈಟ್ ಹಾಕಿ ಕೊಂಡಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಶುಕ್ರವಾರ ಮುಂಜಾನೆ ಜಯಂತಿ ನಾಯ್ಕ ಎಂಬವರು ದನ ಕಟ್ಟಲು ಹೋಗಿದ್ದ ಸಂದರ್ಭ ಅವರ ಮೇಲೆ ಚಿರತೆ ದಾಳಿ ಮಾಡಿದ್ದು, ಅವರ ಕೈಗಳಿಗೆ ಪರಚಿದ ಗಾಯಗಳಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ಸಾರ್ವಜನಿಕರ ಬಳಿ ಮಾತು ಕತೆ ನಡೆಸಿ ಕಾರ್ಯಾಚರಣೆ ನಡೆಸುವ ಮೂಲಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.