ಬೆಳ್ತಂಗಡಿ: ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಶಾಕ್ - ಓರ್ವ ಸಾವು
Friday, November 24, 2023
ಬೆಳ್ತಂಗಡಿ: ಇಲ್ಲಿನ ಧರ್ಮಸ್ಥಳ ಗ್ರಾಮದ ಮಲ್ಲರ್ಮಾಡಿ ಎಂಬಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ಸ್ಪರ್ಶಿಸಿ, ವಿದ್ಯುತ್ ಆಘಾತದಿಂದ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಧರ್ಮಸ್ಥಳ ಗ್ರಾಮದ ಮಲ್ಲರ್ಮಾಡಿ ನಿವಾಸಿ ಬಾಲಕೃಷ್ಣ ಶೆಟ್ಟಿ(49) ಮೃತಪಟ್ಟವರು.
ಬೆಳಗ್ಗೆ ಸ್ಥಳೀಯ ನಿವಾಸಿ ಬೊಮ್ಮಣ್ಣ ಗೌಡ ಎಂಬವರ ಮನೆಗೆ ತೋಟದ ಕೆಲಸಕ್ಕೆ ಬಾಲಕೃಷ್ಣ ಶೆಟ್ಟಿ ಹೋಗಿದ್ದರು. ಈ ವೇಳೆ ತೋಟದಲ್ಲಿ ಸೊಪ್ಪುಸದೆ ಕೊಯ್ಯಲು ಅವರು ಅಲ್ಯೂಮಿನಿಯಂ ಏಣಿ ಎತ್ತಿಕೊಂಡು ಹೋಗುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ತೋಟದ ನಡುವೆ ಹಾದುಹೋಗಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿ ವಿದ್ಯುತ್ ಆಘಾತಗೊಂಡಿದ್ದಾರೆ. ಪರಿಣಾಮ ತೀವ್ರ ಅಸ್ವಸ್ಥಗೊಂಡ ಅವರು ಕುಸಿದು ಬಿದ್ದರೆನ್ನಲಾಗಿದೆ. ತಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದರೂ ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.