ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಪ್ರಕರಣ ನಡೆದು ವರ್ಷದ ಬಳಿಕ ಚಾರ್ಜ್ ಶೀಟ್ ಸಲ್ಲಿಸಿದ ಎನ್‌ಐಎ ಮಂಗಳೂರಿನ ಕದ್ರಿ ದೇಗುಲ ಗುರಿಪಡಿಸಿ ಬಾಂಬ್ ತಂದಿದ್ದ ಮೊಹಮ್ಮದ್ ಶಾರೀಕ್ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ಸ್ಫೋಟ ಸಂಚು ರೂಪಿಸಿದ್ದ ಬಾಂಬರ್
Wednesday, November 29, 2023
ಮಂಗಳೂರು, ನ.29: ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು ಒಂದು ವರ್ಷದ ಬಳಿಕ ಮೊಹಮ್ಮದ್ ಶಾರೀಕ್ ಮತ್ತು ಸೈಯದ್ ಯಾಸೀನ್ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
2022ರ ನವೆಂಬರ್ 19ರಂದು ಕಂಕನಾಡಿ ಬಳಿಯ ನಾಗುರಿಯಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆಗಿತ್ತು. ಮೊಹಮ್ಮದ್ ಶಾರೀಕ್, ಕುಕ್ಕರ್ ಬಾಂಬನ್ನು ಕದ್ರಿ ದೇವಸ್ಥಾನ ಪರಿಸರದಲ್ಲಿ ಸ್ಫೋಟಿಸಲು ತರುತ್ತಿದ್ದಾಗ ನಾಗುರಿಯಲ್ಲಿ ಅಕಸ್ಮಾತ್ ಸ್ಫೋಟಗೊಂಡಿತ್ತು. ಸ್ಫೋಟ ಘಟನೆಯಲ್ಲಿ ಮೊಹಮ್ಮದ್ ಶಾರೀಕ್ ಅರೆಬರೆ ಬೆಂದು ಹೋಗಿದ್ದರೆ, ಆಟೋ ಚಾಲಕ ಪುರುಷೋತ್ತಮ ಪೂಜಾರಿ ನಲ್ವತ್ತು ಶೇಕಡಾದಷ್ಟು ಸುಟ್ಟು ಹೋಗಿದ್ದರು. ಘಟನೆ ಬಳಿಕ ನಾಲ್ಕು ತಿಂಗಳ ಕಾಲ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಶಾರೀಕ್ ನನ್ನು ಗುಣಮುಖನಾದ ಬಳಿಕ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಬಾಂಬ್ ಸ್ಫೋಟ ಘಟನೆ ಬಗ್ಗೆ 2022ರ ನವೆಂಬರ್ 23ರಂದು ದೆಹಲಿ ಎನ್‌ಐಎ ವಿಭಾಗದಲ್ಲಿ 120 ಬಿ, 307 ಐಪಿಸಿ ಮತ್ತು ಸ್ಫೋಟಕ ಕಾಯ್ದೆಯಡಿ 3, 4 ಮತ್ತು 5ರ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗಿತ್ತು. 2023ರ ಜುಲೈ ತಿಂಗಳಲ್ಲಿ ಶಾರೀಕ್ ಮತ್ತು ಸೈಯದ್ ಯಾಸಿನ್ ಅವರನ್ನು ಎನ್‌ಐಎ ಬಂಧಿಸಿತ್ತು. ತನಿಖೆಯ ಬಳಿಕ ಇದೇ ನ.29ರಂದು ಬುಧವಾರ ಇವರಿಬ್ಬರ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾಗಿ ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. ಹಿಂದುಗಳನ್ನು ಭಯಪಡಿಸುವ ಉದ್ದೇಶದಿಂದ ಕದ್ರಿ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಿಸಲು ಸಂಚು ಹೂಡಿದ್ದರು ಎಂದು ಹೇಳಿಕೆಯಲ್ಲಿ ಉಲ್ಲೇಖ ಮಾಡಿದ್ದಾರೆ.
ಶಾರೀಕ್ ಮತ್ತು ಯಾಸೀನ್ ತಮ್ಮ ಆನೈನ್ ಹ್ಯಾಂಡ್ಲರ್ ಗಳ ಸೂಚನೆಯಂತೆ, ಬಾಂಬ್ ಸ್ಫೋಟಕ್ಕೆ ಸ್ಕೆಚ್ ಹಾಕಿದ್ದರು. ಸ್ಫೋಟಕ ಸಾಮಗ್ರಿಯನ್ನು ಯಾಸೀನ್ ಒದಗಿಸಿದ್ದರೆ, ಅದನ್ನು ಬಳಸ್ಕೊಂಡು ಮೊಹಮ್ಮದ್ ಶಾರೀಕ್ ಕುಕ್ಕರ್ ಬಾಂಬ್ ತಯಾರಿಸಿದ್ದ ಎಂದು ಎನ್‌ಐಎ ಅಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶಾರೀಕ್ ಮೊದಲ ಬಾರಿಗೆ 20200 ಮಂಗಳೂರಿನಲ್ಲಿ ಲಷ್ಕರ್ ಉಗ್ರರ ಪರವಾಗಿ ಗೋಡೆ ಬರಹ ಬರೆದು ತನಿಖಾ ಏಜನ್ಸಿಗಳ ಟಾರ್ಗೆಟ್ ಆಗಿದ್ದ. ಅದೇ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ನಡೆದ ಭಯೋತ್ಪಾದಕ ಕೃತ್ಯ ಬಾಂಬ್ ಟ್ರಯಲ್ ಪ್ರಕರಣದಲ್ಲಿಯೂ ಶಾರೀಕ್ ಹೆಸರು ಕೇಳಿಬಂದಿತ್ತು. ಪ್ರಕರಣದಲ್ಲಿ ಯಾಸೀನ್ ಸೇರಿದಂತೆ ಹತ್ತು ಮಂದಿಯನ್ನು ಎನ್‌ಐಎ ಬಂಧಿಸಿತ್ತು.
ಬಾಂಬ್ ಟ್ರಯಲ್ ಪ್ರಕರಣದಲ್ಲಿ ಶಾರೀಕ್, ಯಾಸೀನ್ ಸಹಿತ 9 ಮಂದಿಯ ವಿರುದ್ಧ ಎನ್‌ಐಎ ಅಧಿಕಾರಿಗಳು ಕಳೆದ ಜೂನ್ 30ರಂದು ದೋಷಾರೋಪ ಸಲ್ಲಿಸಿದ್ದರು. ದೇಶದ ವಿರುದ್ಧ ಮುಸ್ಲಿಂ ಯುವಕರನ್ನು ಪ್ರಚೋದಿಸಿ, ಐಸಿಸ್ ನೆಟ್ವರ್ಕ್ ಸೇರುವಂತೆ ಮಾಡುವ ಕೃತ್ಯದಲ್ಲಿ ಯಾಸೀನ್ ಮತ್ತು ಶಾರೀಕ್ ನಿರತರಾಗಿದ್ದರು ಎಂದು ತಿಳಿಸಲಾಗಿತ್ತು.