ಮಂಗಳೂರು: ಮುಸ್ಲಿಂ ಯುವತಿಯನ್ನು ವಿವಾಹವಾದ ಬಜರಂಗದಳದ ಕಾರ್ಯಕರ್ತ - ಹಿಂದೂ ಧರ್ಮಕ್ಕೆ ಮತಾಂತರ
Friday, December 8, 2023
ಮಂಗಳೂರು: ಲವ್ ಜಿಹಾದ್ ವಿರುದ್ಧ ಸದಾ ದನಿಯೆತ್ತುವ ಬಜರಂಗದಳದಲ್ಲಿಯೇ ಲವ್ ಕೇಸರಿ ಎಂಬ ಹೆಸರಿನಲ್ಲಿ ಅಂತರ್ಧರ್ಮೀಯ ವಿವಾಹವಾಗಿದೆ. ಬಜರಂಗದಳದ ಕಾರ್ಯಕರ್ತನೋರ್ವನೇ ಮುಸ್ಲಿಂ ಯುವತಿಯನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಿ ಮದುವೆಯಾಗಿದ್ದಾನೆ.
ನಗರದ ಕೋಮುಸೂಕ್ಷ್ಮ ಪ್ರದೇಶ ಸುರತ್ಕಲ್ ನಲ್ಲಿಯೇ ಇಂಥಹದ್ದೊಂದು ಘಟನೆ ನಡೆದಿದೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪ್ರಶಾಂತ್ ಭಂಡಾರಿ(31), ಮುಸ್ಲಿಂ ಯುವತಿ ಆಯೇಷಾ(20)ಳೊಂದಿಗೆ ವಿವಾಹವಾಗಿದ್ದಾನೆ.
ಕಾಟಿಪಳ್ಳ ಮೂರನೇ ಬ್ಲಾಕ್ ಆಶ್ರಯ ಕಾಲನಿ ನಿವಾಸಿಗಳಾದ ಇಬ್ಬರೂ ಮೂರು ವರ್ಷಗಳಿಂದ ಪ್ರೀತಿಯ ಬಲೆಗೆ ಬಿದ್ದಿದ್ದರು. ಈ ಪ್ರೀತಿಯ ವಿಚಾರ ತಿಳಿದು ಮನೆಯಲ್ಲಿ ಗಲಾಟೆಯಾಗಿತ್ತು. ಆದರೆ ನ.30ರಂದು ಇಬ್ಬರೂ ಮನೆಬಿಟ್ಟು ತೆರಳಿದ್ದಾರೆ. ಮನೆಬಿಟ್ಟು ತೆರಳುವುದಕ್ಕಿಂತ ಮೊದಲು ಪ್ರಶಾಂತ್ ಆಯೆಷಾ ತಾಯಿಯೊಂದಿಗೆ, 'ತಾನು ಆಯಿಷಾಳನ್ನು ಕರೆದೊಯ್ದಿದ್ದೇನೆ ನನ್ನ ತಂಗಿ ತಾಯಿಯ ಜೊತೆ ಮನೆಗೆ ಬರುತ್ತೇನೆ' ಎಂದು ಹೇಳಿದ್ದ ಎನ್ನಲಾಗಿದೆ.
ಮುಸ್ಲಿಂ ಯುವತಿಯನ್ನು ಕರೆದೊಯ್ದ ಪ್ರಶಾಂತ್ ಸುಳ್ಯದ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾನೆ. ಆಯೇಷಾ ಇದೀಗ ಅಕ್ಷತಳಾಗಿ ಬದಲಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಯುವತಿ ಹೆತ್ತವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದು ಪ್ರಶಾಂತ್ ಯಾನೆ ಪಚ್ಚು ಎಂಬಾತ ಪುತ್ರಿಯನ್ನು ಕರೆದೊಯ್ದಿದ್ದಾನೆ ಎಂದು ದೂರು ನೀಡಿದ್ದಾರೆ. ಸದ್ಯ ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. "ಲವ್ ಜಿಹಾದ್" ಗೆ ಬದಲಾಗಿ ಹಿಂದೂ ಯುವಕ "ಲವ್ ಕೇಸರಿ" ಮಾಡಿದ್ದಾನೆ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ವಾದಿಸುತ್ತಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ಭಂಡಾರಿ ಮೇಲೆ ರೌಡಿ ಶೀಟರ್ ತೆರೆಯಲಾಗಿದೆ. ಈತ ದೀಪಕ್ ರಾವ್ ಹತ್ಯೆ ಆರೋಪಿ ಪಿಂಕಿ ನವಾಜ್ ಎಂಬಾತನ ಹತ್ಯೆಗೂ ಯತ್ನಿಸಿದ್ದ ಎನ್ನಲಾಗಿದೆ.