ಮಂಗಳೂರು: ಮಂಗಳಾ ಈಜುಕೊಳದಲ್ಲಿ ಮುಳುಗಿ ಯುವಕ ಮೃತ್ಯು
Tuesday, December 12, 2023
ಮಂಗಳೂರು: ನಗರದ ಲೇಡಿಹಿಲ್ ಬಳಿಯಿರುವ ಮಂಗಳಾ ಈಜುಕೊಳದಲ್ಲಿ ಯುವಕನೋರ್ವನು ಮುಳುಗಿ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.
ಹರಿಯಾಣ ರಾಜ್ಯದ ಗುರುಗಾಂವ್ ಮೂಲದ ಅಭಿಷೇಕ್ ಆನಂದ್ (30) ಮೃತಪಟ್ಟ ಯುವಕ.
4.45ರಿಂದ 5.30ವರೆಗೆ ಮಂಗಳಾ ಈಜುಕೊಳದಲ್ಲಿ ಈಜಾಡಲು ಪ್ರವೇಶಾವಕಾಶವಿದೆ. ಅಭಿಷೇಕ್ ಆನಂದ್ ಸಂಜೆ 4.30 ಸುಮಾರಿಗೆ ಮಂಗಳಾ ಈಜುಕೊಳಕ್ಕೆ ಈಜಾಡಲು ಆಗಮಿಸಿ, ಟಿಕೆಟ್ ಪಡೆದಿದ್ದಾನೆ. 4.45ಕ್ಕೆ ಅವರು ಈಜುಕೊಳಕ್ಕೆ ಇಳಿದಿದ್ದಾರೆ. ಆದರೆ 5.05ರ ಸುಮಾರಿಗೆ ಏಕಾಏಕಿ ಆತ ನೀರಿನಲ್ಲಿ ಮುಳುಗಿದ್ದಾನೆ. ಆದರೆ ಈ ವೇಳೆ ಸುಮಾರು 30ರಷ್ಟು ಮಂದಿ ಈಜುಕೊಳದಲ್ಲಿ ಈಜಾಡುತ್ತಿದ್ದರು. ಆದರೆ ಅಭಿಷೇಕ್ ಆನಂದ್ ಮುಳುಗಿದ್ದು ಯಾರ ಗಮನಕ್ಕೂ ಬಂದಿಲ್ಲ ಎನ್ನಲಾಗಿದೆ.
ಓರ್ವ ಬಾಲಕ ಈಜಾಡುತ್ತಾ ನೀರಿನಾಳಕ್ಕೆ ಹೋದಾಗ ಅಭಿಷೇಕ್ ಆನಂದ್ ದೇಹ ನೀರಿನಡಿಯಲ್ಲಿ ಕಂಡುಬಂದಿದೆ. ತಕ್ಷಣ ಆತ ಲೈಫ್ ಗಾರ್ಡ್ ಗಳಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಲೈಫ್ ಗಾರ್ಡ್ ಗಳು ಈಜುಕೊಳಕ್ಕೆ ಹಾರಿ ಆತನನ್ನು ಮೇಲಕ್ಕೆತ್ತಿದ್ದಾರೆ. ಆತನಿಗೆ ಎದೆಗೆ ಪಂಪಿಂಗ್, ಕೃತಕ ಉಸಿರಾಟ ನೀಡಿದರೂ, ಆತನಿಂದ ಯಾವ ಸ್ಪಂದನೆಯೂ ದೊರಕಿಲ್ಲ. ಆದ್ದರಿಂದ ಆತನನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ತಪಾಸಣೆ ನಡೆಸಿ ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಬರ್ಕೆ ಠಾಣಾ ಪೊಲೀಸರು ಅಭಿಷೇಕ್ ಆನಂದ್ ಮೃತಪಟ್ಟಿರುವುದಕ್ಕೆ ಕಾರಣವೇನೆಂದು ತನಿಖೆ ನಡೆಸುತ್ತಿದ್ದಾರೆ.