ಅಭ್ಯರ್ಥಿಗಳ ಗೆಲುವಿಗೆ ಅವಿರತ ಶ್ರಮಿಸೋಣ- ಶಾಸಕ ಪ್ರತಾಪ್ ಸಿಂಹ ನಾಯಕ್ ಕರೆ

ಅಭ್ಯರ್ಥಿಗಳ ಗೆಲುವಿಗೆ ಅವಿರತ ಶ್ರಮಿಸೋಣ- ಶಾಸಕ ಪ್ರತಾಪ್ ಸಿಂಹ ನಾಯಕ್ ಕರೆ


ಮಂಗಳೂರು : ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಪ್ರತಿ ಮತದಾರರನ್ನು ನೇರವಾಗಿ ಸಂಪರ್ಕಿಸುವ ಕೆಲಸ ಆಗಬೇಕು. ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಶಾಸಕ ಪ್ರತಾಪ್ ಸಿಂಹ ನಾಯಕ್ ಕರೆ ನೀಡಿದರು.

ನಗರದ ಹೊರವಲಯದಲ್ಲಿರುವ ಅಸೈಗೋಳಿಯ ಬಂಟರ ಭವನದಲ್ಲಿ ರವಿವಾರ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಂದು ಚುನಾವಣೆಗೂ ಅದರದ್ದೇ ಆದ ಮಹತ್ವವಿದೆ. ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ, ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಬೋಜೇಗೌಡ ಸ್ಪರ್ಧಿಸಿದ್ದಾರೆ. ಅಭ್ಯರ್ಥಿಗಳ ಗೆಲುವಿಗಾಗಿ ಪ್ರತಿ ಮತದಾರರನ್ನು ನೇರವಾಗಿ ಸಂಪರ್ಕಿಸಬೇಕು. ಹಾಗಾಗಿ ಶಕ್ತಿ ಕೇಂದ್ರ, ಮಹಾ ಶಕ್ತಿ ಕೇಂದ್ರದ ಪ್ರಮುಖರು ಚುರುಕಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ನೈರುತ್ಯ ಪದವೀಧರ ಕ್ಷೇತ್ರದ ಸಹ ಸಂಚಾಲಕ ವಿಕಾಸ್ ಮಾತನಾಡಿ, ಈ ಬಾರಿ ಹೆಚ್ಚು ಮತದಾರರು ನೋಂದಣಿಸಿದ್ದಾರೆ. ಒಬ್ಬೊಬ್ಬ ನಾಯಕರು 20 ಮತದಾರರನ್ನು ತಲುಪಬೇಕು. ಮತದಾರರ ಫೋನ್ ನಂಬರನ್ನು ಪಡೆದು ಮತ ಹಾಕುವ ವಿಧಾನವನ್ನು ತಿಳಿಸಿಕೊಟ್ಟು ಮೊದಲ ಪ್ರಾಶಸ್ತ್ಯದ ಮತವನ್ನು ನಮ್ಮ ಅಭ್ಯರ್ಥಿಗೆ ನೀಡುವಂತೆ ಮನವೊಲಿಸಬೇಕು.
ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ವೈದ್ಯಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ಇದೀಗ ರಾಜಕೀಯ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಸೇವೆ ಸಲ್ಲಿಸುವ ಸಂಕಲ್ಪ ನನ್ನದು. ಎಲ್ಲ ನೌಕರರು, ಪದವೀಧರರ ಸಮಸ್ಯೆಗಳ ಪರಿಹಾರಕ್ಕಾಗಿ ಸದಾ ತಮ್ಮೊಂದಿಗಿರುವೆ. ವಿದ್ಯಾವಂತ ಹಾಗೂ ಪ್ರಜ್ಞಾವಂತ ಪದವೀಧರ ಮತದಾರರು ತಮ್ಮ ಮತವನ್ನು ನನಗೆ ನೀಡುವ ಮೂಲಕ ತಮ್ಮ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
 
ಮಂಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಉದ್ಯೋಗ, ಉನ್ನತ ಶಿಕ್ಷಣ ಸೇರಿದಂತೆ ಬೇರೆ ಬೇರೆ ಕಾರಣಕ್ಕಾಗಿ ಪಟ್ಟಣ, ನಗರ ಪ್ರದೇಶದಲ್ಲಿರುವ ಪದವೀಧರ ಮತದಾರರನ್ನು ನಾವು ತಲುಪಬೇಕು, ದೊಡ್ಡ ಗೆಲುವಾಗಿ ಪರಿವರ್ತನೆ ಮಾಡಬೇಕು, ಪಕ್ಷವು ವಹಿಸಿದ ಹೊಣೆಗಾರಿಕೆಯನ್ನು ಕಾರ್ಯಕರ್ತರು ಸಮರ್ಥವಾಗಿ ನಿರ್ವಹಿಸುತ್ತಾರೆಂಬ ನಂಬಿಕೆ ಇದೆ ಎಂದರು. 
ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಎಸ್.ಎಲ್.ಬೋಜೇಗೌಡ್ರು, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣೀಕ್, ಕ್ಯಾಪ್ಟನ್ ಬ್ರಿಜೇಶ್ ಚೌಟ , ಜಗದೀಶ್ ಆಳ್ವ ಮತ್ತಿತರರು ಹಾಜರಿದ್ದರು.

Ads on article

Advertise in articles 1

advertising articles 2

Advertise under the article