ಮಂಗಳೂರು :158 ವರ್ಷಗಳ ಇತಿಹಾಸವುಳ್ಳ ದೇಶದ ಮೊದಲ ಮಂಗಳೂರು ಟೈಲ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ; ನಸುಕಿನಲ್ಲಿ ಹೊತ್ತಿ ಉರಿದ ಫ್ಯಾಕ್ಟರಿ..!!

ಮಂಗಳೂರು : ನಗರದ ಹೊಯ್ಗೆ ಬಜಾರ್ ನಲ್ಲಿರುವ 158 ವರ್ಷಗಳ ಇತಿಹಾಸವುಳ್ಳ, ದೇಶದ ಮೊದಲ ಟೈಲ್ ಫ್ಯಾಕ್ಟರಿಯೆಂದು ಹೆಸರಾಗಿರುವ ಮಂಗಳೂರು ಟೈಲ್ ಫ್ಯಾಕ್ಟರಿಯಲ್ಲಿ ಮಂಗಳವಾರ ನಸುಕಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ನಸುಕಿನ 3-4 ಗಂಟೆ ವೇಳೆಗೆ ಹಠಾತ್ತಾಗಿ ಫ್ಯಾಕ್ಟರಿಯ ಒಂದು ಭಾಗಕ್ಕೆ ಬೆಂಕಿ ಹತ್ತಿಕೊಂಡಿದ್ದು ಬಹಳಷ್ಟು ನಷ್ಟ ಉಂಟಾಗಿದೆ.
ಆಬಳಿಕ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಯಾವ ಕಾರಣದಿಂದ ಉಂಟಾಗಿದೆ ಎನ್ನುವುದು ತಿಳಿದುಬಂದಿಲ್ಲ. ಈ ಬಗ್ಗೆ ಮಾಲಕರಾದ ಅಲ್ಬುಕರ್ಕ್ ಸನ್ಸ್ ಕುಟುಂಬದ ಸದಸ್ಯರಲ್ಲಿ ಕೇಳಿದಾಗ, ನಷ್ಟದ ಬಗ್ಗೆ ಮತ್ತು ಹೇಗೆ ಬೆಂಕಿ ಉಂಟಾಗಿದೆಯೆಂದು ಇನ್ನೂ ಗೊತ್ತಾಗಿಲ್ಲ ಎಂದಿದ್ದಾರೆ. ಮಂಗಳೂರು ಟೈಲ್ ಫ್ಯಾಕ್ಟರಿಯನ್ನು 1868ರಲ್ಲಿ ಬ್ರಿಟಿಷರ ಆಡಳಿತ ಇದ್ದಾಗ ಅಲೆಕ್ಸ್ ಅಲ್ಬುಕರ್ಕ್ ಪೈಯವರು ಆರಂಭಿಸಿದ್ದರು. ಸದ್ಯ ಈ ಕುಟುಂಬದ ನಾಲ್ಕನೇ ತಲೆಮಾರಿನವರು ಸಂಸ್ಥೆಯನ್ನು ನಡೆಸುತ್ತಿದ್ದಾರೆ.



ದೇಶ- ವಿದೇಶಕ್ಕೆ ಟೈಲ್ಸ್ ಮತ್ತು ಇನ್ನಿತರ ಮಣ್ಣಿನ ಸಾಮಗ್ರಿಗಳನ್ನು ತಯಾರಿಸಿ ಪೂರೈಸುವುದರಲ್ಲಿ ಅಲ್ಬುಕರ್ಕ್ ಸನ್ಸ್ ಒಡೆತನದ ಈ ಫ್ಯಾಕ್ಟರಿ ಹೆಸರು ಪಡೆದಿದೆ. ಬೆಂಕಿ ಅವಘಡದಿಂದ ಫ್ಯಾಕ್ಟರಿಯ ಒಂದು ಭಾಗಕ್ಕೆ ಮಾತ್ರ ಹಾನಿಯಾಗಿದ್ದು ಉತ್ಪಾದನೆಗೇನೂ ತೊಂದರೆಯಾಗಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ. ಈಗಲೂ ಮಂಗಳೂರು ಟೈಲ್ಸ್ ಸಂಸ್ಥೆಯ ಇಟ್ಟಿಗೆ, ಹಂಚುಗಳಿಗೆ ದೇಶಾದ್ಯಂತ ಬೇಡಿಕೆ ಇದೆ. ವಿಷಯ ತಿಳಿದು ಬೆಂಗಳೂರಿನಲ್ಲಿ ನೆಲೆಸಿದ್ದ ಅಲ್ಬುಕರ್ಕ್ ಸಂಸ್ಥೆಯವರು ಮಂಗಳೂರಿಗೆ ಬಂದಿದ್ದಾರೆ.