ಶಬರಿಮಲೆ :ಚಿನ್ನ ಲೂಟಿ ಪ್ರಕರಣ ; ಕೇರಳ, ಕರ್ನಾಟಕ, ತಮಿಳುನಾಡಿನ 21 ಕಡೆಗಳಲ್ಲಿ ಇಡಿ ದಾಳಿ, 'ಆಪರೇಷನ್ ಗೋಲ್ಡನ್ ಶ್ಯಾಡೋ' ಕಾರ್ಯಾಚರಣೆ

ತಿರುವನಂತಪುರಂ : ಶಬರಿಮಲೆ ಚಿನ್ನ ಲೂಟಿ ಪ್ರಕರಣದಲ್ಲಿ ಕಪ್ಪು ಹಣ ವ್ಯವಹಾರದ ತನಿಖೆಯ ಸಲುವಾಗಿ ಬಂಧಿತ ಆರೋಪಿಗಳ ಮನೆ, ಕಚೇರಿ ಸೇರಿದಂತೆ ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ 21 ಕಡೆ 'ಆಪರೇಷನ್ ಗೋಲ್ಡನ್ ಶ್ಯಾಡೋ' ಹೆಸರಿನಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಬರಿಮಲೆ ಚಿನ್ನ ಲೂಟಿ ಪ್ರಕರಣವನ್ನು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದ್ದರೆ, ಇಡಿ ಅಧಿಕಾರಿಗಳು ಪ್ರಕರಣದ ಹಣಕಾಸು ವಹಿವಾಟು, ಅಕ್ರಮ ಹಣ ವರ್ಗಾವಣೆ, ಗಳಿಸಿದ ಆಸ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಹೊರಟಿದ್ದಾರೆ. ಹಣ ವರ್ಗಾವಣೆಯ ದಾಖಲೆಗಳು ಮತ್ತು ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಳ್ಳಲು ಮತ್ತು ಹಣ ವರ್ಗಾವಣೆಯ ವ್ಯಾಪ್ತಿ ಪತ್ತೆ ಹಚ್ಚಲು ತಪಾಸಣೆ ನಡೆಸಲಾಗುತ್ತಿದೆ ಎಂದು ಇ.ಡಿ ತಿಳಿಸಿದೆ.
ಚಿನ್ನ ಲೂಟಿ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ವೇಳೆ ಇ.ಡಿ ಗುಪ್ತಚರ ವಿಭಾಗವೂ ಪ್ರಾಥಮಿಕ ತನಿಖೆ ಆರಂಭಿಸಿತ್ತು. ಬಳಿಕ ಹೈಕೋರ್ಟ್ ಸಂಪರ್ಕಿಸಿ, ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯದ ಅನುಮತಿ ಪಡೆದು ಎಸ್ ಐಟಿಯಿಂದ ಆರೋಪಿಗಳ ಹೇಳಿಕೆಗಳು ಮತ್ತು ಪ್ರಕರಣದ ಎಫ್‌ಐಆರ್ ಪ್ರತಿ ಪಡೆದು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿದೆ. ಎಸ್‌ಐಟಿ ಆರೋಪಿಗಳನ್ನಾಗಿ ಹೆಸರಿಸಿದ 15ಕ್ಕೂ ಹೆಚ್ಚು ಮಂದಿಯನ್ನು ಆರೋಪಿಗಳನ್ನಾಗಿ ಮಾಡಿ ಇಡಿ ಇಸಿಐಆರ್ ದಾಖಲಿಸಿದೆ. ಮುಂದಿನ ದಿನಗಳಲ್ಲಿ ಇ.ಡಿ ಆರೋಪಿಗಳ ಆಸ್ತಿ ಮುಟ್ಟುಗೋಲು ಪ್ರಕ್ರಿಯೆಗೆ ಮುಂದಾಗುವ ಸಾಧ್ಯತೆಯಿದೆ.
ಪ್ರಕರಣದ ಆರೋಪಿಗಳಾದ ಉಣ್ಣಿಕೃಷ್ಣನ್ ಪೋಟ್ಟಿಯ ತಿರುವನಂತಪುರ ಮುಳಿಮಾತ್ ಕಾರೋಟ್ಟ್ ಮತ್ತು ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಮನೆ, ವೆಂಞಾರಮೂಡು ವಲಿಯ ಕಟ್ಟಕಲ್ ನಲ್ಲಿರುವ ಅವರ ಸಹೋದರಿಯ ಮನೆ, ಶಬರಿಮಲೆ ಮಾಜಿ ಆಡಳಿತಾಧಿಕಾರಿ ಮುರಾರಿ ಬಾಬು ಅವರ ಕೊಟ್ಟಾಯಂನಲ್ಲಿರುವ ಮನೆ, ತಿರುವಿದಾಂಕೂರ್ ದೇವಸ್ವಂ ಮಂಡಳಿ(ಟಿಡಿಬಿ) ಮಾಜಿ ಅಧ್ಯಕ್ಷ ಎ.ಪದ್ಮಕುಮಾರ್ ಅವರ ಆರಣ್ಮುಲದ ಮನೆ, ಟಿಡಿಬಿ ಮಾಜಿ ಆಯುಕ್ತ ಹಾಗೂ ಮಾಜಿ ಅಧ್ಯಕ್ಷ ಎನ್.ವಾಸು ಅವರ ಪೆಟ್ಟಾದಲ್ಲಿರುವ ಮನೆ, ಟಿಡಿಬಿ ಮಾಜಿ ಸದಸ್ಯರಾದ ಕೆ.ಪಿ.ಶಂಕರದಾಸ್, ಎನ್. ವಿಜಯಕುಮಾರ್ ಮತ್ತು ತಿರುವಾಭರಣಂ ಮಾಜಿ ಆಯುಕ್ತ ಎಸ್.ಬೈಜು ಅವರ ತಿರುವನಂತಪುರದಲ್ಲಿರುವ ಮನೆ, ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಮತ್ತು ಚೆನ್ನೈ ಸ್ಮಾರ್ಟ್ ಕ್ರಿಯೇಷನ್ ಸಿಇಒ ಪಂಕಜ್ ಭಂಡಾರಿ ಅವರ ಮನೆ ಹಾಗೂ ಸಂಸ್ಥೆಗಳಲ್ಲಿ ಇ.ಡಿ ಶೋಧ ನಡೆಸಿದೆ. ತಿರುವನಂತಪುರದ ದೇವಸ್ವಂ ಮಂಡಳಿ ಪ್ರಧಾನ ಕಚೇರಿಯಲ್ಲಿಯೂ ಇ.ಡಿ ತಂಡ ಶೋಧ ಆರಂಭಿಸಿದೆ.