ಮಂಗಳೂರು :ಸುರತ್ಕಲ್ ಎನ್ಐಟಿಕೆಯಲ್ಲಿ ಫುಡ್ ಪಾಯ್ಸನ್ ; 120ಕ್ಕು ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ, ಸಂಸ್ಥೆ ಆವರಣದಲ್ಲೇ ಚಿಕಿತ್ಸೆ, ಹೊರಗಿನ ಆಹಾರಗಳಿಗೆ ತಾತ್ಕಾಲಿಕ ನಿರ್ಬಂಧ...!!

ಮಂಗಳೂರು : ಸುರತ್ಕಲ್ ಎನ್ಐಟಿಕೆಯಲ್ಲಿ ಫುಡ್ ಪಾಯ್ಸನ್ ಕಾರಣದಿಂದ 120ಕ್ಕು ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಬುಧವಾರ 30 ರಷ್ಟು ಮಂದಿ ಅನಾರೋಗ್ಯಕ್ಕೆ ತುತ್ತಾಗಿದ್ದು ಸಂಸ್ಥೆ ಆವರಣದ ಚಿಕಿತ್ಸಾಲಯದಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿದೆ.
ಫೆ.4ರಿಂದ 8ರ ವರೆಗೆ ಎನ್ಐಟಿಕೆ ಕ್ಯಾಂಪಸಿನಲ್ಲಿ ವಿರಾಸತ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ, ಹೊರಗಿನ ಆಹಾರ, ಖಾದ್ಯಗಳ ಸ್ಟಾಲ್ ಹಾಕಲಾಗಿತ್ತು. ಇದನ್ನು ತಿಂದು ಫುಡ್ ಪಾಯ್ಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಹೊಟ್ಟೆನೋವು, ಲೂಸ್ ಮೋಶನ್ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. 2-3 ದಿನದಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆಂಬ ಮಾಹಿತಿ ಇದೆ.
ಘಟನೆ ಹಿನ್ನೆಲೆಯಲ್ಲಿ ಹೊರಗಿನಿಂದ ಆಹಾರ ವಿತರಣೆಯನ್ನು ಒಂದು ವಾರದ ಮಟ್ಟಿಗೆ ನಿರ್ಬಂಧಿಸಲಾಗಿದೆ. ಕುಡಿಯುವ ನೀರು ಪೂರೈಸುವ ವಾಟರ್ ಪ್ಯೂರಿಫೈರ್ ಯಂತ್ರವನ್ನು ಮತ್ತು ನೀರನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ನಲ್ಲಿಯಲ್ಲಿ ಬರುವ ನೀರನ್ನು ನೇರವಾಗಿ ಅಡುಗೆ ಉದ್ದೇಶಕ್ಕೆ ಬಳಸದಂತೆ ಸೂಚಿಸಲಾಗಿದೆ. ನೀರಿನಲ್ಲಿ ತೊಂದರೆ ಇದೆಯೇ ಎಂದು ತಿಳಿಯಲು ಹೊರಗಿನ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ ಎಂದು ಎನ್ಐಟಿಕೆ ನಿರ್ದೇಶಕ ಬಿ.ರವಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೇನೂ ಹೆಚ್ಚಿನ ತೊಂದರೆ ಆಗಿಲ್ಲ. ಈಗ ಬಹಳಷ್ಟು ಮಂದಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಎನ್ಐಟಿಕೆ ಕ್ಯಾಂಪಸ್ ಒಳಗಿನ ಕ್ಯಾಂಟೀನಲ್ಲಿ ಗುಣಮಟ್ಟದ ಆಹಾರ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳ ಬೇಡಿಕೆಯಂತೆ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮ ಸಂದರ್ಭದಲ್ಲಿ ಹೊರಗಿನ ನಾನ್ ವೆಜ್ ಖಾದ್ಯಗಳ ಸ್ಟಾಲ್ ಹಾಕಲಾಗಿತ್ತು.