ಮಧ್ಯ ಪ್ರದೇಶ: ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿದೆ ಅಪರೂಪದ ಭಾರತದ ಚೀತಾದ ಅಸ್ಥಿಪಂಜರ ಸಂರಕ್ಷಣೆ: ವಿಶೇಷ ಏನು ಅಂತೀರಾ..?

ಮಧ್ಯಪ್ರದೇಶ: ದೇಶದಲ್ಲಿ 75 ವರ್ಷಗಳ ಹಿಂದೆ ಚೀತಾಗಳು ಅಳಿದು ಹೋಗಿದೆ. ದೇಶದಲ್ಲಿ ಮತ್ತೆ ಚೀತಾಗಳ ಆವಾಸಸ್ಥಾನ ಪರಿಚಯಿಸುವ ಉದ್ದೇಶದಿಂದ ಸರ್ಕಾರ ಇತ್ತೀಚಿಗೆ ಅವುಗಳನ್ನು ವಿದೇಶದಿಂದ ಕರೆ ತರುವ ಪ್ರಯತ್ನ ಮಾಡಿದೆ. ಈ ನಡುವೆ ಜಬಲ್ಪುರದ ರಾಬರ್ಟ್‌ಸನ್ ವಿಜ್ಞಾನ ಕಾಲೇಜಿನಲ್ಲಿ ಚೀತಾದ ಅಸ್ಥಿಪಂಜರವನ್ನು ಇನ್ನೂ ಸಂರಕ್ಷಿಸಲಾಗಿದೆ ಎಂದು ತಿಳಿದರೆ ಆಶ್ಚರ್ಯವಾಗಬಹುದು. ಚೀತಾ ಮಾತ್ರವಲ್ಲದೇ ಈ ಸಂಗ್ರಹಾಲಯವು 700ಕ್ಕೂ ಹೆಚ್ಚು ಪ್ರಾಣಿಗಳ ಅಸ್ಥಿಪಂಜರಗಳು, ಪಕ್ಷಿ ಕಲಾಕೃತಿಗಳು ಮತ್ತು ಇತರ ಆಕರ್ಷಕ ಪ್ರದರ್ಶನಗಳನ್ನು ಒಳಗೊಂಡಿವೆ.
1873ರಲ್ಲಿ ಈ ಕಾಲೇಜನ್ನು ಬ್ರಿಟಿಷರು ಸ್ಥಾಪಿಸಿದರು. ಇದನ್ನು ಮೂಲತಃ ಸಾಗರದಲ್ಲಿ 1836ರಲ್ಲಿ ಸ್ಥಾಪಿಸಲಾಗಿತ್ತು. ಬಳಿಕ 1873ರಲ್ಲಿ ಜಬಲ್ಫುರಕ್ಕೆ ಸ್ಥಳಾಂತರಗೊಳಿಸಲಾಯಿತು. ಬ್ರಿಟಿಷರು ಸ್ಥಾಪಿಸಿದ ಈ ವಿಜ್ಞಾನ ಕಾಲೇಜು ಇಂದಿಗೂ ಕೂಡ ಮಧ್ಯಪ್ರದೇಶದಲ್ಲಿ ಅತ್ಯುತ್ತಮ ವಿಜ್ಞಾನ ಶಿಕ್ಷಣವನ್ನು ನೀಡುತ್ತಿದೆ. ಈ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಈ ವಸ್ತು ಸಂಗ್ರಹಾಲಯ ಇದೆ.
ಪ್ರಸ್ತುತ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ ಸುನೀತಾ ಶರ್ಮಾ ಅವರು ಮಾತನಾಡಿ, ಈ ಕಾಲೇಜಿನಲ್ಲಿ 1957ರಲ್ಲಿ ಸಂಗ್ರಹಾಲಯ ಪ್ರಾರಂಭಿಸಲಾಯಿತು. ಆದರೆ, ವಸ್ತು ಸಂಗ್ರಹಾಲಯದಲ್ಲಿರುವ ಕೆಲವು ಪ್ರಾಣಿಗಳ ಅಸ್ಥಿಪಂಜರವನ್ನು ಈ ಮೊದಲೇ ಸಂಗ್ರಹಿಸಿದ್ದಾಗಿದ್ದು, ಅವು ಪುರಾತನದ್ದಾಗಿದೆ ಎಂದರು.
ಇಲ್ಲಿರುವುದು ಭಾರತೀಯ ಮೂಲದ ಚೀತಾದ ಅಸ್ಥಿಪಂಜರ: ಇದೀಗ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದಾಗಿ ಈ ಚೀತಾಗಳನ್ನು ಕರೆತಂದು, ದೇಶದಲ್ಲಿ ಮರು ಪರಿಚಯಿಸಲಾಗಿದೆ. ಆದರೆ, ಇಲ್ಲಿ ಸಂಗ್ರಹಾಲಯದಲ್ಲಿರುವುದು ಭಾರತೀಯ ಚೀತಾದ ಮೂಳೆಗಳಾಗಿವೆ. ಚೀತಾದ ಉಗುರುಗಳಿಂದ ಹಿಡಿದು ಹಲ್ಲುಗಳವರೆಗೆ ಎಲ್ಲವನ್ನೂ ಸಂರಕ್ಷಿಸಲಾಗಿದೆ ಎಂದರು.
ಮೂಳೆಗಳನ್ನು ಗಮನಿಸಿದಾಗ ಇದು ವಯಸ್ಕ ಚೀತಾದ್ದು ಎಂದು ತಿಳಿದು ಬರುತ್ತಿದೆ. ಈ ಅಸ್ಥಿಪಂಜರವನ್ನು ರಕ್ಷಿಸಲು ನಾಫ್ಥಲೀನ್ ಬಾಲ್ ಮತ್ತು ಫಾರ್ಮಾಲಿನ್ ದ್ರಾವಣವನ್ನು ಬಳಕೆ ಮಾಡಲಾಗಿದೆ ಅವು ಹಾಳಾಗುವುದನ್ನು ತಡೆಯಲು ಅವುಗಳಿಗೆ ಒಂದು ರೀತಿಯ ಬಣ್ಣವನ್ನು ಸಹ ಅದಕ್ಕೆ ಬಳಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ವಿಜ್ಞಾನ ಕಾಲೇಜಿನಲ್ಲಿರುವ ಸಂಗ್ರಹಾಲಯವೂ ಕೇವಲ ಕಾಲೇಜಿನ ಪ್ರಾಣಿಶಾಸ್ತ್ರದ ವಿದ್ಯಾರ್ಥಿಗಳಿಗೆ ಮಾತ್ರ ಸಿಮೀತವಾಗಿಲ್ಲ. ಬೇರೆ ಕಾಲೇಜಿನ ವಿದ್ಯಾರ್ಥಿಗಳಿಗೂ ಪ್ರಾಣಿಶಾಸ್ತ್ರ ಅಧ್ಯಯನಕ್ಕೆ ಈ ಮ್ಯೂಸಿಯಂ ಮುಕ್ತಗೊಳಿಸಲಾಗಿದೆ
ಈ ವಸ್ತು ಸಂಗ್ರಹಾಲಯವು ಮಧ್ಯಪ್ರದೇಶದ ಪ್ರಾಣಿಗಳ ಅಸ್ಥಿಪಂಜರಗಳನ್ನು ಮಾತ್ರವಲ್ಲದೇ ಪ್ರಪಂಚದ ವಿವಿಧ ಭಾಗಗಳಲ್ಲಿ ಕಂಡುಬರುವ ಸುಮಾರು 700 ಜಾತಿಯ ಪ್ರಾಣಿಗಳ ಮೂಳೆಗಳನ್ನು ಸಹ ಇಲ್ಲಿ ಸಂರಕ್ಷಿಸಲಾಗಿದೆ. ಇವುಗಳಲ್ಲಿ ಹಲವು ಪ್ರಾಣಿಗಳು ನಶಿಸಿಹೋಗಿವೆ.
ಈ ವಸ್ತು ಸಂಗ್ರಹಾಲಯವು ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಅಂಟಾರ್ಕ್ಟಿಕಾದಲ್ಲಿ ಕಂಡುಬರುವ ಸೀಲ್ಗಳ ಅಸ್ಥಿಪಂಜರಗಳನ್ನು ಹೊಂದಿವೆ. ಈ ಪ್ರಾಣಿಶಾಸ್ತ್ರ ಸಂಗ್ರಹಾಲಯವು ಆರ್ತ್ರೋಪಾಡ್‌ಗಳು, ಮೃದ್ವಂಗಿಗಳು, ಮೀನುಗಳು, ಸರೀಸೃಪಗಳು, ಹಾವುಗಳು, ಪಕ್ಷಿಗಳು, ಸಸ್ತನಿಗಳು ಮತ್ತು ಅನೇಕ ಭ್ರೂಣಗಳನ್ನು ಸಹ ಹೊಂದಿವೆ. ಮಾನವ ಮೂಳೆಗಳನ್ನು ಸಹ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ
ಕಾನೂನುಗಳು ಬದಲಾಗಿರುವುದರಿಂದ ಇಂದು ಈ ರೀತಿಯ ವಸ್ತುಸಂಗ್ರಹಾಲಯವನ್ನು ಮರುಸೃಷ್ಟಿಸಲು ಸಾಧ್ಯವಿಲ್ಲ. ಅನೇಕ ಪ್ರಾಣಿಗಳನ್ನು ಅಧ್ಯಯನಕ್ಕಾಗಿ ಬಳಸುತ್ತಿದ್ದರೂ ಯಾವುದೇ ಸಂದರ್ಭದಲ್ಲೂ ಸೆರೆಹಿಡಿಯಲು ಅಥವಾ ಕೊಲ್ಲಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದರು.
ಆಸ್ಟೀಚ್ಗಳು, ನವಿಲುಗಳು, ಹಿಮಾಲಯನ್ ಹದ್ದುಗಳು ಮತ್ತು ಸಣ್ಣ ಹಮ್ಮಿಂಗ್‌ಬರ್ಡ್‌ಗಳಂತಹ ದೊಡ್ಡ ಪಕ್ಷಿಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಅನೇಕ ಪ್ರಾಣಿಗಳು ಮತ್ತು ಪಕ್ಷಿಗಳು ಮೃತಪಟ್ಟ ಬಳಿಕ ಅವುಗಳ ಆಂತರಿಕ ಅಂಗಗಳನ್ನು ತೆಗೆದುಹಾಕಿ, ರಾಸಾಯನಿಕಗಳಿಂದ ಸಂಸ್ಕರಿಸಿ, ತುಂಬಿಸಿ ನಂತರ ಅವುಗಳ ಆಕಾರ ವಿರೂಪಗೊಳ್ಳದಂತೆ ತಡೆಯಲು ನಿಜವಾದ ಚರ್ಮದಿಂದ ಮುಚ್ಚಲಾಗುತ್ತದೆ ಎಂದು ಅವುಗಳ ಸಂರಕ್ಷಣೆ ಕುರಿತು ಡಾ ಸುನೀತಾ ಶರ್ಮಾ ವಿವರಿಸಿದರು