ಬೆಳ್ತಂಗಡಿ :ಅನ್ನ ಉಳಿಸಿದ ದೇವರಾಯರಿಗೆ ರೈತಪೀಠ ಪ್ರಶಸ್ತಿ!“ಬರಿಗಾಲ ಸಂತ 'ಎಂದು ಹೆಸರಾದವರು ಬೆಳ್ತಂಗಡಿಯ ಮಿತ್ತಬಾಗಿಲು ದೇವರಾಯ. 300ಕ್ಕೂ ಹೆಚ್ಚು ಅಪರೂಪದ ತಳಿಗಳನ್ನು ಸಂರಕ್ಷಿಸಿದ ಹೆಗ್ಗಳಿಕೆ.ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ...!!

ಬೆಳ್ತಂಗಡಿ :ಅನ್ನ ಉಳಿಸಿದ ದೇವರಾಯರಿಗೆ ರೈತಪೀಠ ಪ್ರಶಸ್ತಿ!“ಬರಿಗಾಲ ಸಂತ 'ಎಂದು ಹೆಸರಾದವರು ಬೆಳ್ತಂಗಡಿಯ ಮಿತ್ತಬಾಗಿಲು ದೇವರಾಯ. 300ಕ್ಕೂ ಹೆಚ್ಚು ಅಪರೂಪದ ತಳಿಗಳನ್ನು ಸಂರಕ್ಷಿಸಿದ ಹೆಗ್ಗಳಿಕೆ.ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ...!!

ಬೆಳ್ತಂಗಡಿ :ಮಿತ್ತಬಾಗಿಲು ಎಂದರೆ  ಕರ್ನಾಟಕದ ನಕ್ಷೆಯಲ್ಲಿ ಒಂದು ಸಣ್ಣ ಹೆಸರು, ಅಷ್ಟೇ ಚಿಕ್ಕ ಊರು. ಬೆಳ್ತಂಗಡಿ ತಾಲೂಕಿನ ಕುಗ್ರಾಮ ದಿಡುಪೆಯಾಚಿನ ಕಾಡುಬದಿಯ ಹಳ್ಳಿ. ಆದರೆ ಆ ಹೆಸರಿನೊಳಗೆ ಈ ದೇಶದ ಅನ್ನದ ಚರಿತ್ರೆಯೇ ಅಡಗಿದೆ. ಆ ಚರಿತ್ರೆಯ ಜೀವಂತ ಅಧ್ಯಾಯವೇ ಬಿ.ಕೆ. ದೇವರಾಯರು.  ನಾಗರಿಕ ಜಗತ್ತಿನಿಂದ ದೂರದ ಆ ಕಾಡಂಚಿನ ಊರಿನಲ್ಲಿ, ಬರಿಗಾಲಿನಲ್ಲಿ ಮಣ್ಣನ್ನು ತುಳಿದು ನಡೆದ ಈ ನೆಲಸಂತನಿಗೆ ಇದೀಗ ಮೂಡುಬಿದ್ರೆಯ ಕೃಷಿಕ ಉದ್ಯಮಿ  ಡಾ. ರಾಮಕೃಷ್ಣ ಆಚಾರ್ ಅವರು ಸ್ಥಾಪಿಸಿದ ‘ರೈತಪೀಠ’ದ ಮೊತ್ತಮೊದಲ ಪ್ರಶಸ್ತಿ ಲಭಿಸಿದೆ.
          ದೇವರಾಯರಿಗೆ ಈಗ ಎಂಬತ್ತು . ಯಾವತ್ತೂ  ಚಪ್ಪಲಿ ಮೆಟ್ಟದೆ ನಡೆಯುವವರು. ಬಿಳಿ ಮಡಿ ಪಂಚೆ, ತುಂಡು ಕೈ ಅಂಗಿ, ತಲೆಯ ಮೇಲೆ ಮುಂಡಾಸು ಅಥವಾ ಮುಟ್ಟಾಳೆ  – ಇದು ಅವರ ದಿನನಿತ್ಯದ ಉಡುಗೆ. ಹೊರಗೆ ಹೋಗುವಾಗ ಮಾತ್ರ ಒಂದು ಚಿಕ್ಕ ಮೊಬೈಲ್. ಕೈಗೆ ವಾಚ್ ಕಟ್ಟುವ ಅವಶ್ಯಕತೆಯೇ ಇಲ್ಲ; ಕಾಲವನ್ನು ಅವರು ಗಡಿಯಾರದಿಂದಲ್ಲ, ಬೆಳೆಯ ಹಂತಗಳಿಂದ ಅಳೆಯುತ್ತಾರೆ. ಒಂದು ಕಾಲದಲ್ಲಿ ಅಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿದವರು. ಆದರೆ ಬದುಕಿನ ಕೊನೆಯಲ್ಲಿ ಬಡತನದಲ್ಲಿ ಸಿರಿವಂತಿಕೆಯನ್ನು ಕಂಡುಕೊಂಡವರು.
         “ನಾನು ಉಣ್ಣುವ ಅನ್ನ ನನ್ನದೇ ಆಗಬೇಕು; ನನ್ನ ಭೂಮಿಯಲ್ಲೇ ಬೆಳೆದಿರಬೇಕು; ಅದಕ್ಕೆ ನನ್ನ ಬೆವರು ತಾಗಿರಬೇಕು” – ಈ ಒಂದು ತತ್ವವೇ ಅವರ ಸಂಪತ್ತು.
ತಮ್ಮ ಪಾಲಿನ ನಾಲ್ಕೈದು  ಎಕರೆ ಗದ್ದೆಯಲ್ಲಿ ಅವರು ಸುಮಾರು ಎರಡು-ಮೂರು ನೂರಕ್ಕೂ ಹೆಚ್ಚು ಭತ್ತದ ತಳಿಗಳನ್ನು ಸಂರಕ್ಷಿಸಿದ್ದಾರೆ. ಇಳಿವಯಸ್ಸಿನ ಕಾರಣದಿಂದ ಈಗ ಸುಮಾರು ನೂರು ಐವತ್ತಿನಷ್ಟು ತಳಿಗಳನ್ನು ಉಳಿಸಿಕೊಂಡಿದ್ದಾರೆ. 
       ಬತ್ತದ  ತಳಿ ಸಂರಕ್ಷಣೆ ಎಂದರೆ ಬೀಜವನ್ನು ಬಾಟಲಿಯಲ್ಲಿ ಇಟ್ಟು ಕಾಯುವ ಕೆಲಸವಲ್ಲ. ಗದ್ದೆಯನ್ನು ತುಂಡು ತುಂಡಾಗಿ ಹಂಚಿ, ಒಂದೊಂದು ತಳಿಗೆ ಒಂದೊಂದು ನೆಲೆ ಮಾಡಿಕೊಟ್ಟು, ಉಳುಮೆ ಮಾಡಿ, ಬೀಜ ಹರ ಹಾಕಿ, ನೇಜಿ ನೆಟ್ಟು, ಕೊಯ್ಯುವ ತನಕ ಕಾಯುವ ತಪಸ್ಸು. ಕೊಲಿಕೊರತೆ, ಬೀಸುಮಳೆ, ಕಾಡುಪ್ರಾಣಿಗಳು, ಗುಡ್ಡೆ ಕುಸಿತ – ಈ ಎಲ್ಲವೂ ದೇವರಾಯರಿಗೆ ಪ್ರತಿದಿನದ ಸವಾಲುಗಳು. ಇಂಥ ಪರಿಸ್ಥಿತಿಯಲ್ಲೇ ಅವರು ಆರು ದಶಕಗಳ ಕಾಲ ಮಣ್ಣಿನೊಂದಿಗೆ ಬದುಕಿದ್ದಾರೆ.
         ಸಾಮಾನ್ಯವಾಗಿ ಇಂಥ ಕೆಲಸ ಮಾಡುವವರನ್ನು ನಾವು ಕೃಷಿ ವಿಜ್ಞಾನಿಗಳು, ತಜ್ಞರು, ಸಂಶೋಧಕರು ಎಂದು ಕರೆಯುತ್ತೇವೆ. ಅವರಿಗಾಗಿ ಕೃಷಿ ವಿಶ್ವವಿದ್ಯಾಲಯಗಳಿವೆ, ಸಂಶೋಧನಾ ಕೇಂದ್ರಗಳಿವೆ. ಕೋಟ್ಯಂತರ ಹಣ ಖರ್ಚಾಗುತ್ತದೆ. ಗೋಡೆ, ಬೇಲಿ, ಲ್ಯಾಬು,ಗೇಟು, ಸಿಸಿಟಿವಿ – ಎಲ್ಲವೂ ಇರುತ್ತವೆ. ಫಲಿತಾಂಶಗಳು ಭಾಗಶಃ ರೈತಪರವಾಗಿರುತ್ತವೆ. ಅಪವಾದಗಳಿಲ್ಲ ಎಂದು ಹೇಳುವುದಿಲ್ಲ. ಆದರೆ ಮಿತ್ತಬಾಗಿಲಿನಲ್ಲಿ ದೇವರಾಯರು ಮಾಡುತ್ತಿರುವುದು ಇದೇ ಕೆಲಸ – ಯಾವ ಗೋಡೆಯೂ ಇಲ್ಲದೆ, ಯಾವ ಅನುದಾನವೂ ಇಲ್ಲದೆ ಈ ದೇಶದ ಕೃಷಿ ರಂಗಕ್ಕೆ ಅವರು ನೀಡಿದ ಕೊಡುಗೆ ಅಪರಿಮಿತವಾದದ್ದು. ಇವರು ಒಬ್ಬರಲ್ಲ; ಈ ದೇಶದಲ್ಲಿ ಇಂಥ ಸಾವಿರಾರು ರೈತ ವಿಜ್ಞಾನಿಗಳಿದ್ದಾರೆ. ಟೀಎ ಡಿಎ ಗೊತ್ತಿಲ್ಲ, ಪಿಪಿಟಿ ಗೊತ್ತಿಲ್ಲ, ವಿಜ್ಞಾನ ಪರಿಭಾಷೆ ಬಾರದಿರಬಹುದು,ಆದರೆ ಮಣ್ಣಿನ ಭಾಷೆ ಅವರಿಗೆ ಚೆನ್ನಾಗಿ ಗೊತ್ತು.
     ಒಮ್ಮೆ ನಾನು ದೇವರಾಯರನ್ನು  ಕೇಳಿದ್ದೆ – “ಭತ್ತವನ್ನು ಭತ್ತವಾಗಿಯೇ ಮಾರುವುದು ಲಾಭವೋ, ಅಕ್ಕಿ ಮಾಡಿ ಮಾರುವುದು ಲಾಭವೋ?” ಅವರು ನಕ್ಕು ಹೇಳಿದರು: “ಮಾರುವಷ್ಟಿದ್ದರೆ ಅಕ್ಕಿ ಮಾಡುವುದು ಲಾಭ. ಅದು ಮೌಲ್ಯವರ್ಧನೆ. ನನ್ನಿಂದ ಕೆ.ಜಿಗೆ ಎಂಭತ್ತು ರೂಪಾಯಿ ಕೊಟ್ಟು ತೆಗೆದುಕೊಳ್ಳುವವರಿದ್ದಾರೆ. ದನಗಳಿಗೆ ತೌಡು ಸಿಗುತ್ತದೆ, ಉರುವಲಿಗೆ ಉಮಿ ಸಿಗುತ್ತದೆ. ಸಾವಯವ ಅಕ್ಕಿ ಮನೆಗೆ ಬಂದು ತೆಗೆದುಕೊಳ್ಳುವವರಿಗೂ ಖುಶಿ.”
ತಾವು ಬೆಳೆಸಿದ ಅಕ್ಕಿಯನ್ನು ತಾವೇ ತಿನ್ನಬೇಕಾದರೆ ಎದುರಾದ ಕಷ್ಟಗಳನ್ನೂ ಅವರು ಹೇಳುತ್ತಾರೆ. ಒಂದು ಕಾಲದಲ್ಲಿ ಮನೆಯಲ್ಲೇ ಕುಟ್ಟುತ್ತಿದ್ದರು. ನಾಲ್ಕು ಜನ ಸೇರಿ ಒಂದು ಮುಡಿ ಅಕ್ಕಿ ಮಾಡುತ್ತಿದ್ದರು. ಮುಂದೆ ಜನವೇ ಸಿಗಲಿಲ್ಲ. 1979ರ ಸುಮಾರಿಗೆ ಮಿಲ್ಲಿಗೆ ಹೋಗಬೇಕಾಯಿತು. 1990ರಲ್ಲಿ ಮೂರುವರೆ ಸಾವಿರ ಕೊಟ್ಟು ಹಳೆಯ ಹಲ್ಲರ್ ಖರೀದಿಸಿದರು. “ನನ್ನ ಟಿಲ್ಲರ್‌ನಂತೆ ಅದಕ್ಕೂ ಮೂವತ್ತು ತುಂಬಿತು” ಎಂದು ನಗುತ್ತಾರೆ.
     ನಾಟೀ ರೈತರ ಯಶಸ್ಸಿನ ಹಿಂದೆ ‘ಕೈಗುಣ’ ಎಂಬ ಪದ ಬರುತ್ತದೆ. ಕೆಲವರ ಕೈಯಲ್ಲಿ ಬೀಜ ಹಾಕಿದರೆ ಸಾಕು – ಬೆಳೆಯೇ ಉತ್ತರ ಕೊಡುತ್ತದೆ. ದೇವರಾಯರ ಜೀವನವೇ ಅದಕ್ಕೆ ಉದಾಹರಣೆ. ಒಂದು ಬೆಳೆಗೆ ನೂರಾರು ತಳಿ ಬೀಜಗಳನ್ನು ಹಾಕಿ, ಅವುಗಳನ್ನು ಗುರುತಿಸಿ, ಕಾಪಾಡುವುದು ಸಾಮಾನ್ಯ ಸಹನೆಗೆ ಮೀರಿದ ಕೆಲಸ. ಆರು ದಶಕಗಳ ಕಾಲ ಪ್ರತಿವರ್ಷ ನೂರಾರು ತಳಿಗಳನ್ನು ಆವರ್ತನದಲ್ಲಿ ಬೆಳೆಸಿರುವ ಈ ಚರಿತ್ರೆಯೇ ಒಂದು ವಿಶ್ವವಿದ್ಯಾಲಯ.
ಮಿತ್ತಬಾಗಿಲಿನ ಸುತ್ತ ಕಾಡು. ಸಾರ ಮಣ್ಣು ಕಡಿಮೆ. ಕಲ್ಲುಬಂಡೆಗಳ ನಡುವೆ ಗದ್ದೆ. ಬೀಸುಮಳೆ. ಇಂಥ ಗರಿಷ್ಠ ಸವಾಲುಗಳ ನಡುವೆ ದೇವರಾಯರು ಬೀಜ ಧ್ಯಾನವನ್ನು ತಪಸ್ಸಿನಂತೆ ಅನುಸರಿಸಿದ್ದಾರೆ. “ಒಂದು ತಳಿ ಹೋಗಿಬಿಟ್ಟರೆ ಮತ್ತೆ ಅದನ್ನು ಹುಡುಕುವುದು ಎಲ್ಲಿಂದ?” ಎಂಬ ಆತಂಕವೇ ಅವರ ಬದುಕಿನ ತಾಳಮೇಳ. “ಅವರದ್ದು ಸುಖ; ನನ್ನದು ಬದುಕು – ಅನ್ನದ ಬದುಕು” ಎಂದು ಅವರು ಹೇಳುವಾಗ, ಕೃಷಿಯ ತತ್ವವೇ ಅರ್ಥವಾಗುತ್ತದೆ.
       80 ಎಂದರೆ ಕಡಿಮೆಯಲ್ಲ, ದೇಹ ಮನಸ್ಸು ಎರಡು ನಿತ್ರಾಣ ಗೊಳ್ಳುವ ಕಾಲ.ಪೂರ್ಣ ನಿವೃತ್ತಿಯಾಗಬೇಕಾದ ವಯಸ್ಸು.ಜತೆಗೆ ಮಗ, ಮಗಳು ಇದ್ದಾರೆ. ಸೊಸೆ ಆರಂಭಿಸಿದ ಬೀಜ ಬ್ಯಾಂಕ್ ಇದೆ. ಮಗ ಪರಮೇಶ್ವರ ರಾವ್ ಕೂಡ ಅಪ್ಪನ ದಾರಿಯಲ್ಲೇ ಕೆಲವು  ತಳಿಗಳನ್ನು ಮನೆಯಂಗಳದಲ್ಲೇ ಬೆಳೆಸುತ್ತಿದ್ದಾರೆ. ಮುಂದೇನು ಎನ್ನುವುದು ಗೊತ್ತಿಲ್ಲ. ಆದರೆ ನಡೆದಷ್ಟು ದಿನ, ಕೈಯಲ್ಲಿರುವ ಬೀಜಗಳು ಮುಂದಿನ ತಲೆಮಾರಿಗೆ ಉಳಿಯಬೇಕು ಎಂಬ ಜವಾಬ್ದಾರಿಯೇ ದೇವರಾಯರನ್ನು ಇನ್ನೂ ಗದ್ದೆಯಲ್ಲಿ ನಿಲ್ಲಿಸಿದೆ. 
       ದೇವರಾಯರ ಗದ್ದೆಯ ಬದುವಿನಲ್ಲಿ ಒಂದು ಸಲ ಅವರೊಂದಿಗೆ  ಸವಾರಿ ಹೋಗಬೇಕು. ತುಂಬಿದ ತೆನೆಗಳು ತುಂಡರಿಸಿಕೊಂಡು ಅಲ್ಲಲ್ಲಿ ರಾಶಿ ಬಿದ್ದಿವೆ, ಆಗ ತಾನೇ ಅಳಿಲು ಕೆಂಕನ್ ಮಂಗ ನವಿಲು ತಿಂದುಳಿದವುಗಳು ಸಾಕ್ಷಿ ಹೇಳುತ್ತವೆ. ಅಷ್ಟೊಂದು ಕಾಡು ಪ್ರಾಣಿಗಳು ಪಕ್ಷಿಗಳು ನಿಶಾಚರಿಗಳು ಮುಗಿಬೀಳಲು ಕಾರಣ ಅವರ ಗದ್ದೆಯ ಒತ್ತಿಗೆ ಇರುವುದು ದುರ್ಗಮ ಪಶ್ಚಿಮ ಘಟ್ಟ. ಇವತ್ತಿನ ಕಾಡಿನಲ್ಲಿ ಏನಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೊರಗಡೆ ಹಸುರಾಗಿ ಕಾಣಿಸುತ್ತದೆ,ಒಳಗಡೆ ಕಾಡು ಜೀವಿಗಳಿಗೆ ತಿನ್ನಲು ಏನೂ ಉಳಿದಿರುವುದಿಲ್ಲ. ಬರೀ ಪೊಳ್ಳು.ಇಂಥ ಕಾಡಿಗೆ ಅಂಟಿಕೊಂಡೇ ಒಂದು ವಿಶಾಲ ಬಯಲು, ನಡುವೆ ರಾಯರ ಗದ್ದೆಯ ತುಂಬಾ ಬಹು ಬಗೆಯ ಭತ್ತ ಧಾನ್ಯ ಇರುವಾಗ ಕೇಳಬೇಕೆ?ಕಾಡಾಡಿಗಳು ಬರೀ ಒಂದು ಗಂಟೆ ಬಂದು ಹೋದರೆ ಸಾಕು, ಅವುಗಳಿಗೆ ದಿನದ ಅನ್ನ ಗ್ಯಾರಂಟಿ.ಆದರೆ ಬೆಳೆದ ದೇವರಾಯರಿಗೆ? 
     ಅನ್ನ ಉಣ್ಣುವ ಯಾರೇ ಆಗಲಿ ದೇವರಾಯ ರೊಂದಿಗೆ  ಮಾತನಾಡುವಾಗ ಗದ್ದೆಯ ಬದು ಸುತ್ತುವಾಗ ಹೊಳೆಯ ನಡುವೆ ನಡೆಯುವಾಗ ಆಗುವ ಅನುಭವವೇ ಬೇರೆ. ಪ್ರತಿಬಾರಿಯೂ ಆ ಸಂತ ಭತ್ತ ಬಿಟ್ಟು ಆಚೆ ಈಚೆ ಕದಲುವುದೇ ಇಲ್ಲ,ಅದರ ಸುತ್ತಲೇ ತಿರುಗುತ್ತಾರೆ.
      ಸರಳವಾಗಿ ಬದುಕುವುದನ್ನು ಮಣ್ಣೇ ಕಳಿಸಿಕೊಡುತ್ತದೆ ಎನ್ನುವುದಕ್ಕೆ ಮಿತ್ತ ಬಾಗಿಲು ದೇವರಾಯರೇ ಸಾಕ್ಷಿ. ದೇವರಾಯರನ್ನು ಯಾವುದೇ ಕಠಿಣ ಕಾಯಿಲೆಗಳು ಕಾಡಿದ್ದಿಲ್ಲ, ಬದುಕುವ ಸಮಯವನ್ನೆಲ್ಲ ಅನ್ನದ ಸಮಯವನ್ನಾಗಿ ಪರಿವರ್ತಿಸಿದ ಕಾರಣಕ್ಕೆ ಹಣದ ವಿಚಾರ- ವಿಕಾರ ಭಾದಿಸಿಲ್ಲ. ಅವರ ವೇಗ- ಕ್ರಿಯಾಶೀಲತೆ ಇವೆಲ್ಲವನ್ನು ಗಮನಿಸಬೇಕಾದರೆ ಬಹುತಳಿಯ ಭತ್ತದ ಗದ್ದೆಯ ಬದುವಿನಲ್ಲೊಮ್ಮೆ ಅವರೊಂದಿಗೆ ಸುತ್ತಾಡಬೇಕು. ಅವರ ಪುಟುಪುಟು ಹೆಜ್ಜೆಯ ವೇಗ, ಜೊತೆಗೆ ನೆಲದ ಮಾತು, ನಡುವೆ ಕಣ್ಣು ಮುಚ್ಚಿ ಮುಚ್ಚಿ ಮಾತನಾಡುವ ಧ್ಯಾನ, ಜೀವನಾಸಕ್ತಿ ಕಿರಿಯರಿಗೂ ಮಾದರಿ. ಈ ತಳಿ ಗುರು ದೇವರಾಯರ ಜೊತೆಗೆ ಒಂದು ದಿನವಲ್ಲ ಒಂದು ಗಂಟೆ ಮಾತನಾಡಿದರೆ ಅವರ ಜೀವನೋತ್ಸವ ಅರಿವಾಗುತ್ತದೆ. ಅವರ ಅನ್ನದ ಬದುಕಿನ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆಯುವುದೇ ಒಂದು ಅದ್ಭುತ ಅಪರಿಮಿತ ಅನುಭವ.
     ನಿಮಗೆ ಗೊತ್ತಿರಬೇಕು ಕರಾವಳಿಯ ಮಲೆನಾಡಿನ ಬಹುತೇಕ ಭತ್ತದ ಗದ್ದೆಗಳಲ್ಲಿ ಇವತ್ತು ಕಟ್ಟಡ ತಪ್ಪಿದರೆ ಅಡಿಕೆ ರಬ್ಬರ್ ನಂತಹ ವಾಣಿಜ್ಯ ಬೆಳೆಗಳು ಚಿಗುರಲು ಅಕ್ಕಿಗೆ ಬೆಲೆ ಇಲ್ಲದಿರುವುದೇ ಕಾರಣವಾಗಿದೆ. ಬಹುತೇಕ ವಾರ್ಷಿಕ ಲಕ್ಷ ಲಕ್ಷ ಸುರಿಯುವ ಅಡಿಕೆ ತೋಟಗಳ ಬುನಾದಿ ಒಂದು ಕಾಲದ ಮೂರು ಬೆಳೆಯ ಗದ್ದೆಗಳೇ. ಉಣ್ಣುವ ಅನ್ನಕ್ಕಾಗಿ ಅವುಗಳನ್ನು ನಮ್ಮ ಹಿರಿಯರು ನಿರ್ಮಿಸಿದ ಪರಿಯನ್ನು ಈಗ ಊಹಿಸಿದರೆ ಭಯವಾಗುತ್ತದೆ.
        ದೇವರಾಯರ ಈ ಎಲ್ಲ ಸಾಧನೆಗೆ 2025ರಲ್ಲಿ ರಾಷ್ಟ್ರಪತಿಗಳಿಂದ ‘ದೇಶದ ಅತ್ಯುತ್ತಮ ತಳಿ ಸಂರಕ್ಷಕ’ ಎಂಬ ಗೌರವವೂ ಲಭಿಸಿದೆ. ಆದರೆ ದೇವರಾಯರು ಯಾವತ್ತೂ ಪ್ರಶಸ್ತಿ-ಬಹುಮಾನಗಳ ಬೆನ್ನಿಗೆ ಬಿದ್ದವರಲ್ಲ. ಮಣ್ಣಿನ ಕೆಲಸವೇ ಅವರ ಧ್ಯಾನ. ಆ ಕಾರಣಕ್ಕೇ ಈಗ ರೈತಪೀಠದ ಮೊದಲ ಪ್ರಶಸ್ತಿ ಅವರಿಗೆ ಲಭಿಸಿರುವುದು ಯೋಗ್ಯವೂ, ಅರ್ಥಪೂರ್ಣವೂ ಆಗಿದೆ.ಈ ದೇಶದ ಜನ ಉಂಡ ಅನ್ನದಲ್ಲೂ, ಮುಂದೆ  ಉಣ್ಣುವ ಅನ್ನದಲ್ಲೂ ದೇವರಾಯರಂತಹ ರೈತ ವಿಜ್ಞಾನಿಗಳ ಶ್ರಮ ಅಡಗಿದೆ. ಅದನ್ನು ದೊಡ್ಡ ಮಾತುಗಳಲ್ಲಿ ಅಲ್ಲ; ಮಣ್ಣಿನಷ್ಟು ಸರಳವಾದ ಗೌರವದಲ್ಲಿ ಗುರುತಿಸುವುದೇ ಸಾರ್ಥಕ. ರೈತಪೀಠದ ಮೊದಲ ಪ್ರಶಸ್ತಿ ಆ ಕಾರಣಕ್ಕೇ ಒಂದು ಸುದ್ದಿ ಅಲ್ಲ – ಒಂದು ನ್ಯಾಯ.
ನರೇಂದ್ರ ರೈ ದೇರ್ಲ

Ads on article

Advertise in articles 1

advertising articles 2

Advertise under the article