ಮಂಗಳೂರು: ಶಿವರಾತ್ರಿ ಉತ್ಸವಕ್ಕಾಗಿ ಕಲ್ಲಡ್ಕ ತೆರಳುತ್ತಿದ್ದ ಆಟೋ ಪಲ್ಟಿ ; ಬೈಕ್ ತಪ್ಪಿಸಲು ಹೋಗಿ ನಿಲ್ಲಿಸಿದ್ದ ಆಟೋಗೆ ಡಿಕ್ಕಿ, ಮಹಿಳೆ ಸಾವು..!!

ಮಂಗಳೂರು: ಶಿವರಾತ್ರಿ ನಿಮಿತ್ತ ಕಲ್ಲಡ್ಕದ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಆಟೋ ಪಲ್ಟಿಯಾಗಿದ್ದು ಮಹಿಳೆಯೊಬ್ಬರು ದಾರುಣ ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಾರಿಪಳ್ಳ - ಕಡೆಗೋಳಿ ಎಂಬಲ್ಲಿ ನಡೆದಿದೆ.
ಮಂಗಳೂರಿನ ಅತ್ತಾವರದ ಪ್ರಕಾಶ್ ಎಂಬವರ ಪತ್ನಿ ವಿಶಾಲಾಕ್ಷಿ (43) ಮೃತ ಮಹಿಳೆ. ಇವರು ತನ್ನ ತಂಗಿ ಮತ್ತು ಅವರ ಮಕ್ಕಳ ಜೊತೆಗೆ ಸಂಬಂಧಿಕರ ಆಟೋದಲ್ಲಿ ಮಂಗಳೂರಿನಿಂದ ಕಲ್ಲಡ್ಕ ಕಡೆಗೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರಿಪಳ್ಳ - ಪೊಳಲಿ ದ್ವಾರ ಕಡೆಯಿಂದ ಬೈಕ್ ಸವಾರನೊಬ್ಬ ನುಗ್ಗಿಸಿದ್ದು ಈ ವೇಳೆ ಅದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಇವರಿದ್ದ ಆಟೋ ಅಲ್ಲಿ ನಿಂತಿದ್ದ ಮತ್ತೊಂದು ಆಟೋಗೆ ಡಿಕ್ಕಿಯಾಗಿ ರಸ್ತೆಗೆ ಪಲ್ಟಿಯಾಗಿದೆ.
ಅಪಘಾತ ಸಂದರ್ಭದಲ್ಲಿ ಬದಿಯಲ್ಲಿ ಕುಳಿತಿದ್ದ ವಿಶಾಲಾಕ್ಷಿ ಅವರು ರಸ್ತೆಗಪ್ಪಳಿಸಿದ್ದರಿಂದ ತಲೆಗೆ ಪೆಟ್ಟು ಬಿದ್ದಿದೆ. ಉಳಿದವರು ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ. ಕೂಡಲೇ ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು ಅಷ್ಟರಲ್ಲಿ ಮೃತಪಟ್ಟಿದ್ದಾರೆ. ಬೈಕ್ ಡಿಕ್ಕಿಯಾದರೂ ಆತನಿಗೆ ತೊಂದರೆ ಆಗಿಲ್ಲ. ಬಂಟ್ವಾಳ ಗ್ರಾಮಾಂತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವರಾತ್ರಿ ನಿಮಿತ್ತ ನರಹರಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿದ್ದು ಕುಟುಂಬಕ್ಕೆ ಶಾಕ್ ಆಗಿದೆ.