ಬೆಳಗಾವಿ :ಹಾಲುಜೇನು' ಸಿನಿಮಾ ಹೋಲುತ್ತೆ ಬೆಳಗಾವಿ ಪ್ರೇಮಿಗಳ ಲವ್ ಸ್ಟೋರಿ: ಕ್ಯಾನ್ಸರ್​ಗೂ ಕುಗ್ಗದ ವಿಷ್ಣು-ಲಕ್ಷ್ಮೀ ಪ್ರೀತಿ!!!!

ಬೆಳಗಾವಿ :ಹಾಲುಜೇನು' ಸಿನಿಮಾ ಹೋಲುತ್ತೆ ಬೆಳಗಾವಿ ಪ್ರೇಮಿಗಳ ಲವ್ ಸ್ಟೋರಿ: ಕ್ಯಾನ್ಸರ್​ಗೂ ಕುಗ್ಗದ ವಿಷ್ಣು-ಲಕ್ಷ್ಮೀ ಪ್ರೀತಿ!!!!

ಬೆಳಗಾವಿ: ಪ್ರೀತಿಸಿದ ಹುಡುಗಿಗೆ ಮದುವೆಗೂ ಮೊದಲೇ ಕ್ಯಾನ್ಸರ್ ತಗುಲಿತ್ತು. ಯಾರಾದರೂ‌ ಆಗಿದ್ದರೆ ಆಕೆಯನ್ನು ಬಿಟ್ಟು ಬೇರೆ ಮದುವೆ ಆಗುತ್ತಿದ್ದರು. ಆದರೆ, ಈತ ಮಾತ್ರ ಆ ಹುಡುಗಿ ಕೈ ಬಿಡಲಿಲ್ಲ. ಮನೆಯವರ ವಿರೋಧದ ನಡುವೆಯೂ ಆ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿತು. ಪತ್ನಿಯನ್ನು ತಾಯಿಯಂತೆ ಪತಿ ಸಲಹುತ್ತಿದ್ದಾರೆ. ಜೊತೆಗೆ ಸ್ಲಂ ಮಕ್ಕಳಿಗೆ ಆಟ, ಪಾಠ ಕಲಿಸುತ್ತಾ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಪ್ರೇಮಿಗಳ ದಿನದಂದು ಅಪರೂಪದ ಲವ್ ಸ್ಟೋರಿ ಇಲ್ಲಿದೆ.

ವರನಟ ಡಾ. ರಾಜಕುಮಾರ ಮತ್ತು ಮಾಧವಿ ಅಭಿನಯದ 'ಹಾಲುಜೇನು' ಸಿನಿಮಾ ಹೋಲುವ ಪ್ರೇಮಕಥೆಯನ್ನೇ ಬೆಳಗಾವಿಯ ಕಣಬರಗಿ ಬಳಿಯ ಸಾಗರ ನಗರ ಸ್ಲಂ ಅಪಾರ್ಟಮೆಂಟ್​ ನಿವಾಸಿ ಆಗಿರುವ ವಿಷ್ಣು (34) ಮತ್ತು ಲಕ್ಷ್ಮೀ (34) ದಂಪತಿ ಪ್ರೀತಿ ಹೋಲುತ್ತದೆ. ಆ ಸಿನಿಮಾದಲ್ಲಿ ಕ್ಯಾನ್ಸರ್​​​ ಪೀಡಿತ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ನಾಯಕ ಡಾ. ರಾಜಕುಮಾರ್ (ಅಣ್ಣಾವ್ರು) ಹೇಗೆಲ್ಲಾ ಕಷ್ಟಪಡುತ್ತಾರೆ ಎಂಬುದು ಪ್ರೇಕ್ಷಕರ ಕಣ್ಣಾಲೆಯಲ್ಲಿ ನೀರು ತರಿಸುತ್ತದೆ. ಅದೇರೀತಿ ಇಲ್ಲಿಯೂ ವಿಷ್ಣು ತಮ್ಮ ಹೆಂಡತಿ ಲಕ್ಷ್ಮೀ ಅವರ ಜೀವ ಉಳಿಸಿಕೊಳ್ಳಲು ಕಳೆದ 14 ವರ್ಷಗಳಿಂದ ಹೋರಾಡುತ್ತಿದ್ದಾರೆ.

ಸಣ್ಣ ವಿಷಯಗಳಿಗೆ ಬೇರೆ ಆಗುವವರ ನಡುವೆ ಅಪರೂಪದ ಜೋಡಿ: ಆರೋಗ್ಯ ಪರೀಕ್ಷೆ ಮಾಡಿಸಿ, ಯಾವುದೇ ರೋಗ ಇಲ್ಲ ಎಂದು ಖಚಿತವಾದ ಮೇಲೆಯೇ ಮದುವೆ ಆಗುವವರ ನಡುವೆ, ಮದುವೆ ಆಗುವ ಎರಡು ವರ್ಷ ಮೊದಲೇ ಕ್ಯಾನ್ಸರ್ ಇರೋದು ಗೊತ್ತಿದ್ದರೂ, ನಮ್ಮ ಪ್ರೀತಿ ದೊಡ್ಡದು. ಆ ಮಾರಕ ಕ್ಯಾನ್ಸರ್ ರೋಗವನ್ನು ನಮ್ಮ ನೈಜ ಪ್ರೀತಿ ಹೊಡೆದೊಡಿಸುತ್ತದೆ ಎನ್ನುವ ವಿಶ್ವಾಸದೊಂದಿಗೆ ಮದುವೆ ಆದ ವಿಷ್ಣು-ಲಕ್ಷ್ಮೀ ಜೋಡಿ ದಾಂಪತ್ಯಕ್ಕೆ 11 ವರ್ಷಗಳ ಸಂಭ್ರಮ‌. ಇಷ್ಟು ನೋವಿನ ನಡುವೆಯೂ ಇಬ್ಬರ ಮಧ್ಯೆ ಒಂದು ಚೂರು ಪ್ರೀತಿ ಕಮ್ಮಿ‌ ಆಗಿಲ್ಲ. ಸಣ್ಣಪುಟ್ಟ ವಿಷಯಗಳಿಗೆ ಡಿವೋರ್ಸ್ ಪಡೆದುಕೊಳ್ಳುವ ಇಂದಿನ‌ ಕಾಲದಲ್ಲಿ ವಿಷ್ಣು ಮತ್ತು ಲಕ್ಷ್ಮೀ ಮಾದರಿ ಆಗಿದ್ದಾರೆ.

ಮೂಲತಃ ರಾಯಬಾಗ ತಾಲೂಕಿನ ಬೆಂಡವಾಡದ ವಿಷ್ಣು ಇಂಗಳಿ ಮತ್ತು ಗೋಕಾಕ್ ಫಾಲ್ಸ್​ನ ಲಕ್ಷ್ಮೀ ಕಣಗಾರ ಪಿಯುಸಿ ಕಲಿತಿದ್ದಾರೆ. ಇಬ್ಬರದ್ದು ಕಡು ಬಡತನದ ಹಿನ್ನೆಲೆ. ಹಾಗಾಗಿ, 2009ರಲ್ಲಿ ರಾಮದುರ್ಗದ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಆ ವೇಳೆ ದುಡಿಯುವಾಗಲೇ ವಿಷ್ಣು ಮೇಲೆ ಲಕ್ಷ್ಮೀ ಅವರಿಗೆ ಲವ್ ಆಗಿತ್ತು. ಆರಂಭದಲ್ಲಿ ವಿಷ್ಣು ಒಪ್ಪಿರಲಿಲ್ಲ. ನಾವೆಲ್ಲಾ ಬಡವರು ನಮಗೆ ಯಾಕೆ ಈ‌ ಪ್ರೀತಿ-ಗೀತಿ. ಅದರಲ್ಲೂ ಅಂತರ್ಜಾತಿ ಎಂದಿದ್ದರು. ದಿನ ಕಳೆದಂತೆ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾದಂತೆ, ಮದುವೆ ಆಗುವುದಾದರೆ ಮಾತ್ರ ಲವ್ ಮಾಡೋಣ ಅಂತಾ ವಿಷ್ಣು ಹೇಳಿದ್ದರು. ಆ ಪ್ರಕಾರ ಇಬ್ಬರ ನಡುವೆ ಜಾತಿ ಮೀರಿ ಪ್ರೀತಿ ಅರಳಿತು.

ಕ್ಯಾನ್ಸರ್​ ಕಾಣಿಸಿಕೊಂಡಾಗ ದೂರ ಸರಿಯಲೆತ್ನಿಸಿದ ಲಕ್ಷ್ಮಿ: ಅದಾದ ಬಳಿಕ ಸ್ವಲ್ಪ ದಿನ ಇಬ್ಬರೂ ಕೆಲಸಕ್ಕೆ ಬೆಂಗಳೂರಿಗೆ ಹೋಗಿದ್ದರು. ನಂತರ ಸವದತ್ತಿ, ಬೆಳಗಾವಿಯಲ್ಲೂ‌ ಕೆಲಸ ಮಾಡಿದರು. ಅಷ್ಟೊತ್ತಿಗೆ 2012ರಲ್ಲಿ ಲಕ್ಷ್ಮೀ ಅವರಿಗೆ ಬ್ಲಡ್​ ಕ್ಯಾನ್ಸರ್​ ಕಾಣಿಸಿಕೊಂಡಿತು.‌ ಆಗ ವಿಷ್ಣು ಪುಣೆಯಲ್ಲಿ ಕಾಲ್​ ಸೆಂಟರ್​ಗೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಲಕ್ಷ್ಮೀ ವಿಷ್ಣುವಿನಿಂದ ದೂರ ಇರಲು ಬಯಸುತ್ತಾರೆ.

ಯಾಕೆ ಹೀಗೆ ಮಾಡುತ್ತಿದ್ದಾಳೆ ಅಂತಾ ಅನುಮಾನಗೊಂಡು ಬೆಳಗಾವಿಗೆ ಓಡೋಡಿ ಬಂದ ನನಗೆ ದೊಡ್ಡ ಶಾಕ್ ಎದುರಾಗಿತ್ತು.‌‌ ಲಕ್ಷ್ಮೀಗೆ ಬ್ಲಡ್ ಕ್ಯಾನ್ಸರ್ ಆಗಿರುವ ವಿಷಯ ತಿಳಿದು ದಿಗ್ಭ್ರಾಂತಗೊಂಡೆ. ಆಗ ಲಕ್ಷ್ಮೀ ನಾನು ಎಷ್ಟು ದಿನ ಬದುಕುತ್ತೇನೆ ಅಂತಾ ಗೊತ್ತಿಲ್ಲ. ನನ್ನ ಮರೆತು ಬಿಡು, ಬೇರೆ ಮದುವೆ ಆಗಿ ಸುಖವಾಗಿ ಇರ್ರು ಅಂತಾ ಕಣ್ಣೀರು ಸುರಿಸಿದಳು. ನಾನು ಮೊದಲೇ ನಿನಗೆ ಹೇಳಿದ್ದೆ, ಮದುವೆ ಆಗುವುದಿದ್ದರೆ ಮಾತ್ರ ಲವ್ ಮಾಡೋಣ ಅಂತಾ. ನೀನು ನನ್ನ ಜೊತೆಗೆ ಒಂದು ದಿನ ಬದುಕಿದರೂ ಸಾಕು ಎಂದು 2014 ಅಕ್ಟೋಬರ್ 10ರಂದು ಬೆಳಗಾವಿ ಕಪಿಲೇಶ್ವರ ಮಂದಿರದಲ್ಲಿ ಇಬ್ಬರೂ ಮನೆಯವರ ವಿರೋಧದ ನಡುವೆ ಮದುವೆ ಆಯಿತು. ಲಕ್ಷ್ಮೀ ಮತ್ತು ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಸಿಬ್ಬಂದಿಗಳೇ ಮುಂದೆ ನಿಂತು ಮದುವೆ ಮಾಡಿಸಿದರು. ಲಕ್ಷ್ಮೀ ತಂದೆ ಮತ್ತು ಅಕ್ಕ ಮಾತ್ರ ಬಂದಿದ್ದರು. ನನ್ನ ಅಪ್ಪ-ಅವ್ವ ಬಂದಿರಲಿಲ್ಲ" ಎಂದು ಹೇಳುತ್ತಾರೆ ವಿಷ್ಣು.


"ಮದುವೆ ಆಗಲು ಯಾವುದೇ ಅಭ್ಯಂತರ ಇಲ್ಲ. ಆದರೆ, ನಿಮಗೆ ಮಕ್ಕಳು ಆಗುವುದಿಲ್ಲ. ಎಷ್ಟು ವರ್ಷ ಬದುಕುತ್ತಾರೋ ಅಂತಾ ನಾವು ಗ್ಯಾರಂಟಿ ಕೊಡಲ್ಲ" ಅಂತಾ ವೈದ್ಯರು ಹೇಳಿದ್ದರು. ಆದರೆ, ದೇವರ ಮೇಲೆ ಭಾರ ಹಾಕಿ ಜೀವನ ಶುರು ಮಾಡಿದೆವು. ಬರಬರುತ್ತಾ ಲಕ್ಷ್ಮೀ ಆರೋಗ್ಯ ಹದಗೆಡುತ್ತಾ ಹೋಯಿತು. ಬೆಳಗಾವಿ ಕೆಎಲ್ಇ ಆಸ್ಪತ್ರೆ, ಹುಬ್ಬಳ್ಳಿ ಹೆಚ್.ಸಿ.ಜಿ. ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದೆ. ಇಲ್ಲಿಯವರೆಗೆ 15 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದೇನೆ ಎಂದರು.

ಕ್ಯಾನ್ಸರ್ ರೋಗಿಗಳಿಗೆ ವಿಶೇಷ ಸೌಲಭ್ಯ ಕೊಡಿ: ಬಿಸಿಆರ್ ಎಬಿಎಲ್ ಪರೀಕ್ಷೆಯನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹುಬ್ಬಳ್ಳಿ ಹೆಚ್.ಸಿ.ಜಿ. ಆಸ್ಪತ್ರೆ ಮತ್ತು ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಎರಡು ತಿಂಗಳಿಗೊಮ್ಮೆ ಮಾಡಬೇಕು. ಆ ವರದಿ ಆಧರಿಸಿ ಬೆಂಗಳೂರಿನ‌ ಸಂಸ್ಥೆಯೊಂದರ ಬಳಿ ಮಾತ್ರೆ ತೆಗೆದುಕೊಂಡು ಬರುತ್ತೇನೆ. ವರ್ಷಕ್ಕೆ ಒಂದು ಬಾರಿ 3 ಪಾಯಿಂಟ್ ರಕ್ತ ಹಾಕಿಸಬೇಕು. ಮಾತ್ರೆ ಏನೋ ಉಚಿತವಾಗಿ ಸಿಗುತ್ತದೆ. ಇನ್ನುಳಿದ ಚಿಕಿತ್ಸೆಗೆ ದುಡ್ಡು ಕೊಡಲೇಬೇಕು. ಸರ್ಕಾರ ಕ್ಯಾನ್ಸರ್ ಪೀಡಿತರ ಅನುಕೂಲಕ್ಕಾಗಿ ಆಯಾ ಜಿಲ್ಲೆಯಲ್ಲೇ ಚಿಕಿತ್ಸೆ ಸಿಗಬೇಕು. ಕಿಮೋಥೆರಪಿ, ರೆಡಿಯೇಷನ್ ಮಾಡಿಸಿಕೊಳ್ಳಲು ಬರುವ ರೋಗಿಗಳು ಉಳಿದುಕೊಳ್ಳಲು ವ್ಯವಸ್ಥೆ ಸೇರಿ ಮತ್ತಿತರ ಸೌಲಭ್ಯ ನೀಡಬೇಕು ಎಂಬುದು ವಿಷ್ಣು ಇಂಗಳಿ ಅಭಿಪ್ರಾಯ.

ಅಪ್ಪು, ಆರ್.ವ್ಹಿ.ಡಿ. ಮನಸ್ಸು ಗೆದ್ದ ದಂಪತಿ: ಇತ್ತೀಚೆಗೆ ನಿಧನರಾದ ಚಿಕ್ಕಪೇಟೆ ಮಾಜಿ ಶಾಸಕ ಆರ್.ವ್ಹಿ.ದೇವರಾಜ ಅವರು ವಿಷ್ಣು ಮತ್ತು ಲಕ್ಷ್ಮೀ ದಂಪತಿಗೆ ನೆರವಿಗೆ ಹಸ್ತ ಚಾಚಿದ್ದರು. ಸ್ಲಂ ಅಪಾರ್ಟಮೆಂಟ್​ನಲ್ಲಿ ಅವರೇ ಮನೆ ಕೊಡಿಸಿದ್ದಾರೆ. ಇದರಿಂದ ಇರಲು ಸೂರು ಸಿಕ್ಕಿದೆ. ಜೊತೆಗೆ ಕರ್ನಾಟಕ ರತ್ನ ದಿ.ಡಾ.ಪುನೀತರಾಜಕುಮಾರ ಅವರು ಕೂಡ ನಮ್ಮ ಪ್ರೇಮಕಥೆ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಏನೇ ಸಹಾಯ ಬೇಕಿದ್ದರೂ ಕೇಳಿ ಅಂತಾ ಹೇಳಿದ್ದರು. ಅಲ್ಲದೇ ಅಪ್ಪು ನಡೆಸಿಕೊಡುತ್ತಿದ್ದ "ಫ್ಯಾಮಿಲಿ ಪವರ್" ಶೋದಲ್ಲಿ ಭಾಗಿ ಆಗಿದ್ದೆವು. ಒಳ್ಳೆಯ ಮನಸ್ಸಿನ ದೇವರಾಜ್ ಮತ್ತು ಅಪ್ಪು ಸರ್ ಇಬ್ಬರೂ ಅಗಲಿದ್ದಾರೆ ಎಂದು ವಿಷ್ಣು ಭಾವುಕರಾದರು.


ಸ್ಲಂ ಮಕ್ಕಳಿಗೆ ಆಸರೆ: ಸ್ಲಂ ಅಪಾರ್ಟಮೆಂಟ್​ ಬಡ ಮಕ್ಕಳಿಗೆ ವಿಷ್ಣು ಮತ್ತು ಲಕ್ಷ್ಮೀ ದಂಪತಿ ಆಸರೆ ಆಗಿದ್ದಾರೆ. ತಮ್ಮ ಮನೆಯಲ್ಲಿ ಮಕ್ಕಳಿಗೆ ಉಚಿತವಾಗಿ ಪಾಠ, ಆಟ, ನೃತ್ಯ, ಚಿತ್ರಕಲೆ ಸೇರಿ ಎಲ್ಲವನ್ನು ಕಲಿಸಿ ಕೊಡುತ್ತಾರೆ. ದಾನಿಗಳ ಸಹಾಯದಿಂದ ಮಕ್ಕಳಿಗೆ ಬಟ್ಟೆ, ಬುಕ್, ಪೆನ್, ಶೂ ಸೇರಿ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಪ್ರತಿ ಭಾನುವಾರ ಸಮೀಪದ ಪ್ರವಾಸಿತಾಣಗಳಿಗೆ ಕರೆದುಕೊಂಡು ಹೋಗುತ್ತಾರೆ. ಇದರಿಂದ ತಮ್ಮೊಳಗಿನ‌ ನೋವನ್ನು ಮರೆಯುತ್ತಾರೆ. ವಿಷ್ಣು ಮತ್ತು ಗೀತಾ ಅವರದ್ದು ಸಮಾಜಮುಖಿ ವ್ಯಕ್ತಿತ್ವ. ತಮಗೆ ಎಷ್ಟೇ ನೋವು, ಕಷ್ಟ ಇದ್ದರೂ ಇನ್ನೊಬ್ಬರಿಗೆ ಮಿಡಿಯುತ್ತಾರೆ. ನನಗೆ ಸರ್ಕಾರ ಒಂದು ಜಾಗ, ಕಟ್ಟಡ ನಿರ್ಮಿಸಿ ಕೊಟ್ಟರೆ ಸ್ಲಂ ಮಕ್ಕಳ ಜೀವನಮಟ್ಟ ಸುಧಾರಿಸಲು ಸಹಾಯ ಆಗುತ್ತದೆ ಎನ್ನುತ್ತಾರೆ ವಿಷ್ಣು ಇಂಗಳಿ.

ಹೋರಾಡಿ ಸೌಲಭ್ಯ ಕೊಡಿಸಿದ್ದಾರೆ: ತಾವು ವಾಸಿರುವ ಸ್ಲಂ ಅಪಾರ್ಟಮೆಂಟ್​ ಪ್ರದೇಶವು ಕುಡಿಯುವ ನೀರು, ರಸ್ತೆ ಸೇರಿ ಮತ್ತಿತರ ಮೂಲಸೌಕರ್ಯಗಳಿಂದ ವಂಚಿತವಾಗಿತ್ತು. ಸ್ಥಳೀಯರ ನೆರವಿನೊಂದಿಗೆ ಸಾಕಷ್ಟು ಹೋರಾಟ ಮಾಡಿ ಇಲ್ಲಿ ರಸ್ತೆ, ನೀರು ಸೇರಿ ಮತ್ತಿತರ ಸೌಲಭ್ಯಗಳನ್ನು ಕೊಡಿಸಿದ್ದಾರೆ. ಹಾಗಾಗಿ, ಇಲ್ಲಿನ ಜನರಿಗೆ ವಿಷ್ಣು ಮತ್ತು ಲಕ್ಷ್ಮೀ ಮೇಲೆ ವಿಶೇಷ ಗೌರವ ಮತ್ತು ಪ್ರೀತಿ ಇದೆ. ಜೊತೆಗೆ ಗಿಡ-ಮರ ಬೆಳೆಸುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ವಿಷ್ಣು ಪತ್ನಿ ಲಕ್ಷ್ಮೀ ಹೇಳುವುದೇನು..? ಹಾಲುಜೇನು ಸಿನಿಮಾದಲ್ಲಿ ಡಾ. ರಾಜಕುಮಾರ ಅವರಿಗೆ ಮತ್ತೊಂದು ಮದುವೆ ಮಾಡಿಸಲು ಮಾಧವಿ ಅವರು ಹೇಗೆ ಪ್ರಯತ್ನಿಸುತ್ತಾರೊ, ಅದೇ ರೀತಿ ಇಲ್ಲೂ ಲಕ್ಷ್ಮೀ ವಿಷ್ಣುಗೆ ಮದುವೆ ಮಾಡಲು ಹುಡುಗಿ ನೋಡುತ್ತಿದ್ದಾರೆ. ಆದರೆ, ಇದಕ್ಕೆ ವಿಷ್ಣು ಮಾತ್ರ ಒಪ್ಪುತ್ತಿಲ್ಲ. ಬದುಕುವುದಿದ್ದರೆ ನಿನ್ನ ಜೊತೆಯೇ ಎನ್ನುತ್ತಿದ್ದಾರೆ. ತಮ್ಮ ಪತಿಯ ಸೇವೆ ಕುರಿತು ಮಾತನಾಡಿದ ಲಕ್ಷ್ಮೀ, ಜಗತ್ತಿನಲ್ಲಿ ಯಾರೂ ಮಾಡದ ತ್ಯಾಗವನ್ನು ನನ್ನ ಪತಿ ವಿಷ್ಣು ಮಾಡಿದ್ದಾರೆ. ಪ್ರೀತಿಸಿ, ಮೋಸ ಮಾಡಿ ಸಾಕಷ್ಟು ಜನರು ಕೈ ಕೊಡುತ್ತಾರೆ. ಆದರೆ, ನನಗೆ ಕ್ಯಾನ್ಸರ್ ಇದ್ದರೂ ಕೂಡ ನನ್ನನ್ನೇ ಮದುವೆ ಆದ. ಇಂಥ ದೇವರಂತ ಗಂಡ ಸಿಗಲು ನಾನು ಅದೃಷ್ಟ ಮಾಡಿದ್ದೆ. ವಿಷ್ಣುವಿನಿಂದ ನಾನು ಬದುಕಿದ್ದೇನೆ.‌ ಇಲ್ಲದಿದ್ದರೆ ಎಂದೋ ಸತ್ತು ಹೋಗುತ್ತಿದ್ದೆ. ಈಗ ಇಲ್ಲಿನ ಮಕ್ಕಳ ಜೊತೆಗೆ ಕಾಲ ಕಳೆಯುತ್ತಾ, ನಮ್ಮ ನೋವು ಮರೆಯುತ್ತಿದ್ದೇವೆ ಎಂದರು.

ವಿಷ್ಣು, ಲಕ್ಷ್ಮೀ ಅವರು ನಮ್ಮ ಮಕ್ಕಳಿಗೆ ಟ್ಯೂಷನ್ ಹೇಳಿ ಕೊಡುತ್ತಾರೆ. ಬೆಳಗ್ಗೆ ಹುಡುಗರನ್ನು ಎಬ್ಬಿಸಿ ವಾಕಿಂಗ್, ರನ್ನಿಂಗ್ ಕರೆದುಕೊಂಡು ಹೋಗುತ್ತಾರೆ. ಲಕ್ಷ್ಮೀ ಅವರಿಗೆ ಕ್ಯಾನ್ಸರ್ ಇರೋದರಿಂದ ವಿಷ್ಣು ಅಣ್ಣಾ ಸಣ್ಣ ಮಗುವಿನಂತೆ ಅವರನ್ನು ನೋಡಿಕೊಳ್ಳುತ್ತಾರೆ. ತುಂಬಾ ಕಾಳಜಿ ವಹಿಸುತ್ತಾರೆ. ಅವರ ಅನ್ಯೋನ್ಯತೆ ನಮಗೆಲ್ಲಾ ಮಾದರಿ ಆಗಿದೆ ಎಂದು ಸ್ಥಳೀಯರಾದ ಗೀತಾ ಭಜಂತ್ರಿ ಹೇಳಿದರು.

"ಸೋಶಿಯಲ್ ಮಿಡಿಯಾದಲ್ಲಿ ಪರಿಚಯ ಆಗಿ ಮದುವೆ ಆಗಿ, ಮೂರೇ ದಿನಕ್ಕೆ ಸಣ್ಣಪುಟ್ಟ ವಿಷಯಕ್ಕೆ ಡಿವೋರ್ಸ್ ಆಗುವುದನ್ನು ನೋಡಿ ಮನಸ್ಸಿಗೆ ತುಂಬಾ ಬೇಜಾರ ಆಗುತ್ತದೆ. ಪ್ರೀತಿಸುವ ಜೋಡಿ ಮದುವೆ ಆಗಿ, ಎಲ್ಲರೂ ಮೆಚ್ಚುವ ಜೀವನ ನಡೆಸಬೇಕು ಎನ್ನುವುದು ನನ್ನ ಮನವಿ. ನಾನು ಸ್ವಾಮಿ ವಿವೇಕಾನಂದ ಮತ್ತು ಅಪ್ಪು ಅವರ ಅನುಯಾಯಿ. ಹಾಗಾಗಿ, ಅವರು ಹೇಳಿದಂತೆ ಆದರ್ಶ ವ್ಯಕ್ತಿ ಆಗಿ ಬದುಕುತ್ತಿದ್ದೇವೆ‌. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ, ನನ್ನ ಕೈಲಾದ ಮಟ್ಟಿಗೆ ಸಮಾಜ ಸೇವೆ ಮಾಡುತ್ತಿದ್ದೇನೆ" ಎಂದು ವಿಷ್ಣು ಇಂಗಳಿ ಹೇಳಿದರು.

ಒಟ್ಟಾರೆ ತಮ್ಮ ಮನೆಯಲ್ಲೆ ಬಡತನ, ಪತ್ನಿಗೆ ಅನಾರೋಗ್ಯ ಇದ್ದರೂ ಇನ್ನೊಬ್ಬರಿಗಾಗಿ ಮಿಡಿಯುವ ವಿಷ್ಣು ಜೀವನ ನಿಜಕ್ಕೂ ಎಲ್ಲರಿಗೂ ಮಾದರಿ ಆಗಿದೆ. ಸರ್ಕಾರ ಮತ್ತು ದಾನಿಗಳು ಇಂಥವರನ್ನು ಗುರುತಿಸಿ ಸಹಾಯ ಮಾಡಿದರೆ, ಇದರಿಂದ ಬಡ ಜನರಿಗೆ ಆಸರೆ ಆಗಲಿದೆ.


Ads on article

Advertise in articles 1

advertising articles 2

Advertise under the article