ಮಂಗಳೂರು :ದಾವಣಗೆರೆ ಬೆನ್ನಲ್ಲೇ ಮಂಗಳೂರು ಕೋರ್ಟಿಗೂ ಬೆದರಿಕೆ ಸಂದೇಶ ; ಪೊಲೀಸರ ತಪಾಸಣೆ, ಗುಜರಾತಿನಲ್ಲಿ 13 ಶಾಲೆಗಳಿಗೆ ಬೆದರಿಕೆ, ಗುಜರಾತ್ ಖಲೀಸ್ತಾನ್- ದೇಶ ವಿಭಜನೆ ಬಗ್ಗೆ ಇಮೇಲ್....!!!

ಮಂಗಳೂರು: ದಾವಣಗೆರೆ ಬೆನ್ನಲ್ಲೇ ಮಂಗಳೂರು ಜಿಲ್ಲಾ ನ್ಯಾಯಾಲಯಕ್ಕೂ ಕಿಡಿಗೇಡಿಗಳು ಬಾಂಬ್ ಬೆದರಿಕೆಯ ಇ-ಮೇಲ್ ಕಳಿಸಿದ್ದಾರೆ. RDX , IED ರೀತಿಯ ಸ್ಫೋಟಕ ಬಳಸಿ ಕೋರ್ಟನ್ನು ಸ್ಪೋಟಿಸುವ ಬೆದರಿಕೆ ಹಾಕಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಸೋಮವಾರ ಮಧ್ಯಾಹ್ನ ಎಂದಿನಂತೆ ಕೋರ್ಟ್ ಕಲಾಪ ನಡೆಯುತ್ತಿದ್ದಾಗಲೇ ವಿಷಯ ಗೊತ್ತಾಗಿದ್ದು ಪೊಲೀಸರು ದೌಡಾಯಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳವೂ ಬಂದು ಪರಿಶೀಲನೆ ಕೈಗೊಂಡಿದೆ. ಪಾರ್ಕಿಂಗ್, ಕೋರ್ಟ್ ಆವರಣ ಸೇರಿದಂತೆ ನ್ಯಾಯಾಲಯದ ಒಳಗಡೆ ತಪಾಸಣೆ ನಡೆಸಿದ್ದಾರೆ. ಮಂಗಳೂರು ಪೊಲೀಸರು ತಪಾಸಣೆ ಕೈಗೊಂಡಿದ್ದು ಯಾವುದೇ ಸ್ಫೋಟಕ ಮಾದರಿ ಪತ್ತೆಯಾಗಿಲ್ಲ. ಈ ಬಗ್ಗೆ ನಗರದ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಬೆದರಿಕೆ ಸಂದೇಶದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ಕೋರ್ಟಿಗೂ ಸೋಮವಾರ ಬೆಳಗ್ಗೆ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಬೆಳಗ್ಗೆ 8.30ರ ವೇಳೆಗೆ ಬಾಂಬ್ ಬೆದರಿಕೆ ಮೇಲ್ ಬಂದಿದ್ದು ಕೂಡಲೇ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಬಂದು ತಪಾಸಣೆ ನಡೆಸಿದೆ. ಶೋಧ ಕಾರ್ಯದ ಬಳಿಕ ಯಾವುದೇ ಅಸಹಜ ವಸ್ತುಗಳು ಸಿಗದ ಕಾರಣ ಅದೊಂದು ಹುಸಿ ಬಾಂಬ್ ಕರೆಯೆಂದು ಪೊಲೀಸರು ನಿರ್ಧರಿಸಿದ್ದು ಕೋರ್ಟ್ ಆವರಣದಲ್ಲಿ ಬಂದೋಬಸ್ತ್ ಹೆಚ್ಚಿಸಿದ್ದಾರೆ.

ಗುಜರಾತಿನ 13 ಶಾಲೆಗಳಿಗೆ ಬೆದರಿಕೆ ಸಂದೇಶ
ಇದೇ ವೇಳೆ, ಗುಜರಾತಿನ ವಡೋದರಾ ಮತ್ತು ಅಹ್ಮದಾಬಾದ್ ನಗರದಲ್ಲಿ 13 ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ನರೇಂದ್ರ ಮೋದಿ ಮತ್ತು ಅಮಿತ್ ಷಾ ಹೆಸರನ್ನು ಉಲ್ಲೇಖಿಸಿ, ಗುಜರಾತ್ ಮುಂದೆ ಖಲೀಸ್ತಾನ್ ಆಗಲಿದೆ, ಹಿಂದುಸ್ತಾನ್ ಎರಡಾಗಿ ವಿಭಜನೆ ಆಗಲಿದೆ ಎಂದು ಬರೆಯಲಾಗಿದೆ. ಶಾಲೆಗಳ ಆವರಣದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು ಭಯೋತ್ಪಾದಕ ಸಂಘಟನೆ ಕೈವಾಡ ಇದೆಯೇ, ಕಿಡಿಗೇಡಿ ಕೃತ್ಯವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.