ಬೆಂಗಳೂರು :ಹೊಸ ಪ್ರಿಯಕರನೊಂದಿಗೆ ಸೇರಿ ಮಾಜಿ ಪ್ರಿಯಕರನ ಕೊಂದ ಕಿರುತೆರೆ ನಟಿ! ಮೂವರು ಸೆರೆ...
ಬೆಂಗಳೂರು: ನಗರದ ಬಾಗಲಗುಂಟೆ ಠಾಣಾ ವ್ಯಾಪ್ತಿಯ ವಿಜಯಲಕ್ಷ್ಮಿ ಬಡಾವಣೆಯಲ್ಲಿ ಇತ್ತೀಚಿಗೆ ನಡೆದಿದ್ದ ಮೋಹನ್ ಕೃಷ್ಣ (45) ಎಂಬವರ ನಿಗೂಢ ಹತ್ಯೆ ಪ್ರಕರಣಕ್ಕೆ ಅಚ್ಚರಿಯ ಟ್ವಿಸ್ಟ್ ಸಿಕ್ಕಿದೆ. ಹೊಸ ಪ್ರಿಯಕರನೊಂದಿಗೆ ಸೇರಿ ತನ್ನ ಮಾಜಿ ಪ್ರಿಯಕರನನ್ನು ಕಿರುತೆರೆ ಸಹ ನಟಿಯೊಬ್ಬರು ಹತ್ಯೆಗೈದಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಕಿರುತೆರೆ ನಟಿ ಬಿಂದು, ವಿನಯ್ ಹಾಗೂ ಧನುಷ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ಸಣ್ಣಪುಟ್ಟ ಫೈನಾನ್ಸ್ ಮಾಡುತ್ತಿದ್ದ ಮೋಹನ್ ಕೃಷ್ಣ ತನ್ನ ಪತ್ನಿಯನ್ನು ಬಿಟ್ಟು ಬಿಂದು ಜೊತೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ. ಬಿಂದು ಕೂಡ ಪತಿಯಿಂದ ದೂರವಾಗಿದ್ದಳು. ಭಜರಂಗಿ, ಪೊಲೀಸ್ ಕ್ವಾರ್ಟರ್ಸ್, ಕಾಲಭೈರವ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಬಿಂದು ನಟಿಸಿದ್ದಳು. ಎರಡು ತಿಂಗಳ ಹಿಂದಷ್ಟೇ ಬಿಂದು ಹಾಗೂ ಮೋಹನ್ ಕೃಷ್ಣ ಇಬ್ಬರೂ ಬಂದು ವಿಜಯಲಕ್ಷ್ಮಿ ಬಡಾವಣೆಯಲ್ಲಿರುವ ನಟರಾಜ್ ಎಂಬವರ ಮನೆಯನ್ನು ಬಾಡಿಗೆಗೆ ಪಡೆದಿದ್ದರು.
ಕರಾರುಪತ್ರದ ವಿಚಾರವಾಗಿ ಮಾತನಾಡಿದಾಗ ಒಂದೇ ತಿಂಗಳಿಗೆ ಮನೆ ಖಾಲಿ ಮಾಡುವುದಾಗಿ ಹೇಳಿದ್ದರಿಂದ ಮಾಲೀಕರು ಕರಾರುಪತ್ರವನ್ನು ಮಾಡಿಕೊಂಡಿರಲಿಲ್ಲ ಎಂದು ಮಾಲೀಕರು ಹೇಳಿದ್ದರು. ಮನೆ ಬಳಿ ಬಂದಾಗೆಲ್ಲ ಬಾಗಿಲು ಹಾಕಿರುತ್ತಿತ್ತು. ಮಾರ್ಚ್ 1ರಂದು ಮನೆಯೊಳಗಿಂದ ದುರ್ವಾಸನೆ ಬರುತ್ತಿದ್ದರಿಂದ ಪರಿಶೀಲನೆ ನಡೆಸಿದಾಗ ಮೋಹನ್ ಕೃಷ್ಣನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಸ್ಥಳೀಯರು ಬಾಗಲುಗುಂಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೊಬೈಲ್ ಲೊಕೇಶನ್ ಮತ್ತು ಕಾಲ್ ರೆಕಾರ್ಡ್ ಆಧರಿಸಿ ಬಿಂದು, ವಿನಯ್ ಹಾಗೂ ಧನುಷ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ.
ಮೋಹನ್ ಕೃಷ್ಣನ ಜೊತೆಯಲ್ಲಿದ್ದಾಗಲೇ ವಿನಯ್ ಜೊತೆ ಬಿಂದು ಪ್ರೀತಿಯಲ್ಲಿ ಬಿದ್ದಿದ್ದಳು. ವಿನಯ್ ಸಹ ಆಕೆಯನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದ. ಮದುವೆಗೆ ಮೋಹನ್ ಕೃಷ್ಣ ಅಡ್ಡಿಯಾಗಬಹುದು ಎಂದು ಇಬ್ಬರೂ ಸಹ ಆತನ ಹತ್ಯೆಗೆ ಸ್ಕೆಚ್ ಹಾಕಿದ್ದರು. ಫೆಬ್ರವರಿ 18ರಂದು ರಾತ್ರಿ ಮೋಹನ್ ಕೃಷ್ಣ, ಬಿಂದು, ಆಕೆಯ ಹೊಸ ಪ್ರಿಯಕರ ವಿನಯ್ ಹಾಗೂ ಧನುಷ್ ಎಲ್ಲರೂ ಸೇರಿ ಪಾರ್ಟಿ ಮಾಡಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಮೋಹನ್ ಬಿಂದುವಿನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದ. ಆಗ ಅಲ್ಲೇ ಇದ್ದ ವಿನಯ್ ಕೋಪಗೊಂಡು ತನ್ನ ಬಳಿಯಿದ್ದ ಚಾಕುವಿನಿಂದ ಮೋಹನ್ ಕೃಷ್ಣನಿಗೆ ಮನಬಂದಂತೆ ಇರಿದಿದ್ದ. ಆತ ಜೋರಾಗಿ ಕಿರುಚಾಡಲು ಶುರು ಮಾಡಿದಾಗ ಮೂವರೂ ಸೇರಿ ಆತನ ಮುಖಕ್ಕೆ ಮತ್ತು ಮೂಗಿಗೆ ಸೆಲ್ಲೋ ಟೇಪ್ ಸುತ್ತಿ ಉಸಿರುಗಟ್ಟಿಸಿ ಹತ್ಯೆಗೈದಿದ್ದರು. ಬಳಿಕ ಮನೆ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.