ಒಡಿಶಾ :ಐಷಾರಾಮಿ ಕಾರಲ್ಲಿ ಬಟ್ಟೆ ಅಂಗಡಿಗೆ ಬಂದ ಮಹಿಳೆಯರು: ಕಾಲಿನ ಮಧ್ಯೆ ₹7 ಲಕ್ಷ ಬೆಲೆಯ ಸೀರೆಗಳನ್ನು ಇಟ್ಟುಕೊಂಡು ಎಸ್ಕೇಪ್!
ಒಡಿಶಾ: ಅಂಗುಲ್ ನಗರದ ಅಮ್ಲಾಪದಾದಲ್ಲಿರುವ ಬೊಯಾನಿಕಾ ಶೋರೂಮ್ ಗೆ ಐಷಾರಾಮಿ ಕಾರಿನಲ್ಲಿ 7 ಜನ ಮಹಳೆಯರಿದ್ದ ತಂಡವೊಂದು ಶನಿವಾರ ಬೆಳಗ್ಗೆ 11ಗಂಟೆ ಸಮಯಕ್ಕೆ ಬಂದಿಳಿಯಿತು. ಇವರನ್ನು ನೋಡಿದ ಸೀರೆ ಅಂಗಡಿ ಮಾಲೀಕರು ಖುಷ್ ಆಗಿದ್ದರು. 7 ಜನ ಮಹಿಳೆಯರು, ಅದರಲ್ಲೂ ಐಷಾರಾಮಿ ಕಾರಿನಲ್ಲಿ ಬಂದಿದ್ದಾರೆ ಅಂತಾ ಅವರು ಅಂಗಡಿ ಒಳಗೆ ಪ್ರವೇಶಿಸುತ್ತಿದ್ದಂತೆ ಹೆಚ್ಚು ಬೆಲೆಬಾಳುವ ಒಳ್ಳೆಯ ಗುಣಮಟ್ಟದ ಸಂಬಲ್ಪುರಿ ಸೀರೆಗಳನ್ನೇ ಅವರಿಗೆ ತೋರಿಸುವಂತೆ ತಮ್ಮ ಸಿಬ್ಬಂದಿಗೆ ಮಾಲೀಕರು ಸೂಚಿಸಿದರು.
ಅಂಗಡಿ ಮಾಲೀಕರ ಕಣ್ಣಿಗೆ ಮಂಕುಬೂದಿ ಎರಚಿದ ಮಹಿಳೆಯರು: ತಮ್ಮ ಮಾಲೀಕರು ಸೂಚಿಸಿದಂತೆ ಅಂಗಡಿಯ ಸಿಬ್ಬಂದಿ ಆ ಮಹಿಳೆಯರಿಗೆ ಸಂಬಲ್ಪುರಿ ಸಾರಿಗಳನ್ನೇ ತೋರಿಸಿದರು. ಆದ್ರೆ ಈ ಚಾಲಾಕಿ ಮಹಿಳೆಯರು ಮಾತ್ರ ಈ ಸೀರೆಗಳನ್ನು ಖರೀದಿಸುವ ನೆಪದಲ್ಲಿ ಅವುಗಳನ್ನು ಉಪಾಯದಿಂದ ಕದ್ದೊಯ್ದಿದ್ದಾರೆ. ಇವರ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಬಟ್ಟೆ ಅಂಗಡಿಯ ಮ್ಯಾನೇಜರ್ ಹೇಳುವ ಪ್ರಕಾರ, ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಮ್ಮ ಅಂಗಡಿ ಮುಂದೆ ಒಂದು ಐಷಾರಾಮಿ ಕಾರು ಬಂದು ನಿಂತಿತು. ಅದರಿಂದ ಚಾಲಕ ಮತ್ತು ಏಳು ಜನ ಮಹಿಳೆಯರು ಇಳಿದರು. ಐಷಾರಾಮಿ ಕಾರಿನಲ್ಲಿ 7 ಜನ ಮಹಿಳೆಯರು ಬಂದಿದ್ದಕ್ಕೆ ಸಾಮಾನ್ಯವಾಗಿ ನಮ್ಮ ಸಿಬ್ಬಂದಿ ದುಬಾರಿ ಬೆಲೆಯ ಸೀರೆಗಳನ್ನೇ ಅವರಿಗೆ ತೋರಿಸಿದರು. ಈ ಸಂದರ್ಭದಲ್ಲಿ ನಮ್ಮ ಕೆಲ ಸಿಬ್ಬಂದಿ ಉಪಹಾರ ತಿನ್ನಲು ಹೊರ ಹೋಗಿದ್ದರು. ಹೀಗಾಗಿ ಅಂಗಡಿಯಲ್ಲಿ ಕೇವಲ ಇಬ್ಬರು ಸಿಬ್ಬಂದಿ ಮಾತ್ರ ಇದ್ದರು. ಸೀರೆ ಖರೀದಿಗೆ ಬಂದಿದ್ದ ಮಹಿಳೆಯರು ಖರೀದಿಸುವ ಬದಲಾಗಿ ಆ ಸೀರೆಗಳನ್ನು ತಾವು ಧರಿಸಿದ್ದ ಸೀರೆಯೊಳಗೆ ಅಡಗಿಸಿಟ್ಟುಕೊಂಡು ಹೋಗಿದ್ದಾರೆ. ತಮ್ಮ ತೊಡೆಯ ಸಂದಿನಲ್ಲಿ ಸಂಬಲ್ಪುರಿ ಸೀರೆಗಳನ್ನು ಇಟ್ಟುಕೊಂಡು, ಯಾವುದೇ ಸೀರೆಯನ್ನು ಖರೀದಿಸದೆ ಅಂಗಡಿಯಿಂದ ಹೊರ ಹೋಗಿದ್ದಾರೆ. ಇದು ನಮಗೆ ಸೀರೆಗಳನ್ನು ಲೆಕ್ಕ ಹಾಕುವಾಗ ಗಮನಕ್ಕೆ ಬಂತು. ಆಗ ಸಿಸಿಟಿವಿ ಪರಿಶೀಲನೆ ಮಾಡಿದಾಗ ಆ ಮಹಿಳೆಯರ ಚಾಲಾಕಿತನದ ಬಗ್ಗೆ ಗೊತ್ತಾಯಿತು ಎಂದು ನಡೆದ ಘಟನೆ ಬಗ್ಗೆ ವಿವರಿಸಿದರು.
ಬಟ್ಟೆ ಅಂಗಡಿಯ ಸಿಬ್ಬಂದಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಂಗುಲ್ ಐಐಸಿ ಪ್ರಕಾಶ್ ಚಂದ್ರ ಮಾಝಿ ಬೊಯಾನಿಕಾ ಶೋರೂಮ್ ಗೆ ತೆರಳಿ ಅಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ಅಂಗಡಿಯ ಸಿಬ್ಬಂದಿಯನ್ನು ಈ ಕುರಿತಂತೆ ವಿಚಾರಣೆ ಮಾಡಲಾಗಿದೆ. ಸಿಸಿಟಿವಿಯಲ್ಲಿ ದಾಖಲಾದ ಕಾರು ಬಡಕೇರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸಿರುವುದು ಗೊತ್ತಾಗಿದೆ. ಬಿಎನ್ಎಸ್ 305 ಎ ಅಡಿ ಶನಿವಾರ ಎ.11 ರಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.