ಮುಂಬೈ :ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ಹೃದಯಾಘಾತ: ಮುಂಬೈನ ಆಸ್ಪತ್ರೆಗೆ ದಾಖಲು...!

ಮುಂಬೈ ಎಪ್ರಿಲ್ 11: ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ ಆಶಾ ಭೋಸ್ಲೆ (92) ಅವರಿಗೆ ಶನಿವಾರ (ಏಪ್ರಿಲ್ 11) ಹೃದಯಾಘಾತ ಸಂಭವಿಸಿದ್ದು, ಅವರನ್ನು ಇಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರು ಆಸ್ಪತ್ರೆಯ ತುರ್ತು ವೈದ್ಯಕೀಯ ಸೇವೆಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಆಶಾ ಭೋಸ್ಲೆ ಅವರ ಆರೋಗ್ಯದ ಕುರಿತು ಮಾಹಿತಿ ನೀಡಿರುವ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯ ಡಾ. ಪ್ರತೀತ್ ಸಮ್ದಾನಿ, “ಹೃದಯಾಘಾತದ ಹಿನ್ನೆಲೆಯಲ್ಲಿ ಶನಿವಾರ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ. ಸದ್ಯ ಐಸಿಯು ಮಾದರಿಯ ತುರ್ತು ನಿಗಾ ಘಟಕದಲ್ಲಿ ಅವರಿಗೆ ತೀವ್ರ ಚಿಕಿತ್ಸೆ ನೀಡಲಾಗುತ್ತಿದೆ,” ಎಂದು ತಿಳಿಸಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿ ಅಥವಾ ಅವರ ಕುಟುಂಬಸ್ಥರು ಈವರೆಗೆ ಅಧಿಕೃತವಾಗಿ ಯಾವುದೇ ಬುಲೆಟಿನ್ ಬಿಡುಗಡೆ ಮಾಡಿಲ್ಲ.
ಏಳು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಆಶಾ ಭೋಂಸ್ಲೆ ಅವರು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡಿದ್ದಾರೆ. ಅವರ ಆರೋಗ್ಯ ಸ್ಥಿರವಾಗಲೆಂದು ದೇಶಾದ್ಯಂತ ಗಣ್ಯರು ಮತ್ತು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.