ಮಂಗಳೂರು :ಕರಾವಳಿ ಜಿಲ್ಲೆಗಳಿಗೆ ಬಿಸಿ ಗಾಳಿ ಎಚ್ಚರಿಕೆ;ವಿವಿಧೆಡೆ ಶುಷ್ಕ ವಾತಾವರಣ...
ಮಂಗಳೂರು :ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಶುಷ್ಕ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಕೆಲವೆಡೆ ಅಲ್ಪ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಅಧಿಕ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದ್ದು, ಬಿಸಿ ಗಾಳಿ ಎಚ್ಚರಿಕೆ ನೀಡಲಾಗಿದೆ.
ಎಲ್ಲೆಲ್ಲಿ ಹೀಟ್ ವೇವ್: ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿಯಲ್ಲಿ 35 ಡಿಗ್ರಿಗಿಂತಲೂ ಹೆಚ್ಚಿನ ತಾಪಮಾನವಿರಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಣ ಹವೆ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿಯೂ ಶುಷ್ಕ ವಾತಾವರಣವಿರಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಬಿಸಿ ಗಾಳಿಯಿಂದ ರಕ್ಷಣೆ ಹೇಗೆ?: ಹೀಟ್ ವೇವ್‌ನಿಂದ ರಕ್ಷಿಸಿಕೊಳ್ಳಲು ಜನರು ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಅನಗತ್ಯವಾಗಿ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ತಪ್ಪಿಸಿಕೊಳ್ಳುವುದು ಸೂಕ್ತ. ನಿಯಮಿತವಾಗಿ ನೀರು ಕುಡಿಯಬೇಕು. ಮನೆಯಲ್ಲಿ ಎಳನೀರು, ಮಜ್ಜಿಗೆ, ಜ್ಯೂಸ್ ಮತ್ತಿತರ ತಂಪು ಪಾನೀಯ ಸೇವಿಸುವುದು ಉತ್ತಮವಾಗಿದೆ.
ಜೊತೆಗೆ, ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಅಗತ್ಯ ಸಂದರ್ಭದಲ್ಲಿ ಮನೆಯಿಂದ ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವಂತಹ (ಕಾಫಿ/ಟೀ) ಮತ್ತಿತರ ಕೆಫೀನ್‌ಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಈ ವರ್ಷ ಭಾರತದ ಹೆಚ್ಚಿನ ಭಾಗದಲ್ಲಿ ಸರಾಸರಿ ಅಥವಾ ಕಡಿಮೆ ತಾಪಮಾನ ದಾಖಲಾಗಲಿದೆ. ಆದರೆ ಏಪ್ರಿಲ್ ತಿಂಗಳಿನಿಂದ ಜೂನ್ವರೆಗೆ ಪೂರ್ವ, ಈಶಾನ್ಯ ಮತ್ತು ಮಧ್ಯ ಪ್ರದೇಶಗಳು ಸರಾಸರಿಗಿಂತ ಹೆಚ್ಚಿನ ತಾಪಮಾನ ಹೊಂದಿರಲಿದ್ದು, ಹೆಚ್ಚಿನ ಬಿಸಿ ಅಲೆಗಳನ್ನು ಅನುಭವಿಸಲಿವೆ ಎಂದು ಇತ್ತೀಚೆಗೆ ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಅಲ್ಲದೇ, ಹವಾಮಾನ ಇಲಾಖೆಯು ಏಪ್ರಿಲ್‌ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಬೀಳುವ ಮುನ್ಸೂಚನೆ ನೀಡಿದೆ. ಇದರಿಂದ ಋತುವಿನ ಆರಂಭದಲ್ಲಿ ಹೆಚ್ಚುತ್ತಿರುವ ಶಾಖದ ನಡುವೆ ಜನರಿಗೆ ಕೊಂಚ ಸಮಾಧಾನ ಸಿಗಲಿದೆ.
ಮಿಶ್ರ ಬೇಸಿಗೆ: ಐಎಂಡಿ ಪ್ರಕಾರ, ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಅಥವಾ ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ. ಮಧ್ಯ ಭಾರತ ಮತ್ತು ಪರ್ಯಾಯ ದ್ವೀಪದ ಕೆಲವು ಭಾಗಗಳಲ್ಲಿ ಹಗಲಿನಲ್ಲಿ ಸರಾಸರಿಗಿಂತ ಹೆಚ್ಚಿನ ತಾಪಮಾನ ಇರಲಿದೆ. ಆ ಪ್ರದೇಶಗಳಲ್ಲಿ ಹಗಲಿನ ವೇಳೆ ಹೆಚ್ಚು ತೀವ್ರವಾದ ಉಷ್ಣತೆ ಕಂಡುಬರಲಿದೆ.
ಜೊತೆಗೆ, ಭಾರತದ ಹೆಚ್ಚಿನ ಭಾಗಗಳಲ್ಲಿ ರಾತ್ರಿಗಳು ಸರಾಸರಿಗಿಂತ ಹೆಚ್ಚಿನ ತಾಪಮಾನ ಹೊಂದಿರುವ ನಿರೀಕ್ಷೆಯಿದೆ. ದೀರ್ಘಾವಧಿಯ ಶಾಖದ ಸಮಯದಲ್ಲಿ ರಾತ್ರಿ ವೇಳೆ ಅಧಿಕ ತಾಪಮಾನದಿಂದ ಜನರಿಗೆ ಅಸ್ವಸ್ಥತೆ ಮತ್ತು ಸಂಭಾವ್ಯ ಆರೋಗ್ಯದ ಅಪಾಯಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.