ದಕ್ಷಿಣ ಕನ್ನಡ: ವಿವಾಹ ಮೆಹಂದಿ ಕಾರ್ಯಕ್ರಮದಲ್ಲಿ ಕುಸಿದುಬಿದ್ದು ನಿರೂಪಕ ಸಾವು..!!
ಬಂಟ್ವಾಳ: ವಿವಾಹದ ಮೆಹಂದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಿರ್ವಹಣೆ ಮಾಡಲು ಆರಂಭಿಸಿದ ಯುವಕನೋರ್ವ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ ನಡೆದಿದೆ.
ಫರಂಗಿಪೇಟೆ ಅಬ್ಬೆಟ್ಟು ನಿವಾಸಿ ಅಶ್ವಿಥ್ (32) ಮೃತರು. ತನ್ನ ಸಂಬಂಧಿಕರ ಮದುವೆಯ ಮದರಂಗಿ ಕಾರ್ಯಕ್ರಮದ ಸಂಭ್ರಮ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ನಿರೂಪಣೆ ಮಾಡಲೆಂದು ವೇದಿಕೆಯನ್ನು ಏರಿದಾಗ ಅವರು ಹಠಾತ್ ಕುಸಿದುಬಿದ್ದಿದ್ದಾರೆ. ಕಾರ್ಯಕ್ರಮ ಪ್ರಾರಂಭಿಸುತ್ತಿದ್ದಂತೆ ನಡೆದ ಈ ಘಟನೆಯಿಂದ ಆತಂಕಿತರಾದ ಮನೆಯವರು ಕೂಡಲೇ ಸಮೀಪದ ತುಂಬೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅದಾಗಲೇ ಮೃತಪಟ್ಟಿರುವ ಕುರಿತು ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶ್ವಿಥ್ ಅವರು ಕೆಲ ಕಾಲ ಮಂಗಳೂರಿನಲ್ಲಿ ದೃಶ್ಯ ಮಾಧ್ಯಮಗಳಲ್ಲಿ ಕೆಲಸ ಮಾಡಿಕೊಂಡಿದ್ದು, ಬಳಿಕ ಬೆಂಗಳೂರಿನಲ್ಲಿ ಕೆಲಕಾಲ ಉದ್ಯೋಗದಲ್ಲಿದ್ದರು. ಇತ್ತೀಚೆಗೆ ಫರಂಗಿಪೇಟೆಯಲ್ಲಿನ ಆಸ್ಪತ್ರೆಯೊಂದರಲ್ಲಿ ಸೂಪರ್ ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಯುವವಾಹಿನಿ ಸಹಿತ ಹಲವು ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಕಾರ್ಯಕ್ರಮಗಳ ನಿರೂಪಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದು ಅವರ ಪರಿಚಯಸ್ಥರು ತಿಳಿಸಿದ್ದಾರೆ.
ನಿನ್ನೆ ಏನಾಗಿತ್ತು? ಮರ್ದೋಳಿಯಲ್ಲಿ ವ್ಯಕ್ತಿಯೊಬ್ಬರ ಮೆಹಂದಿ ಕಾರ್ಯಕ್ರಮ ಇದ್ದುದರಿಂದ ಈ ಕಾರ್ಯಕ್ರಮದ ನಿರೂಪಣೆಯನ್ನು ಅಶ್ವಿಥ್ ನಿರ್ವಹಿಸಲು ನಿಗದಿಯಾಗಿತ್ತು. ರಾತ್ರಿ 8:35 ಗಂಟೆಗೆ ಸ್ಟೇಜ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಅವರು ಕುಸಿದುಬಿದ್ದಿದ್ದರು. ಬಳಿಕ ಅವರನ್ನು ತಕ್ಷಣವೇ ವಾಹನದಲ್ಲಿ ಚಿಕಿತ್ಸೆಗೆಂದು ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಪರೀಕ್ಷಿಸಿದಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೆಹಂದಿಯಲ್ಲಿ ಸ್ಟೇಜ್ ಕಾರ್ಯಕ್ರಮ ನಿರ್ವಹಿಸುತ್ತಿದ್ದಾಗ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿಯೋ ಅಥವಾ ಹೃದಯಾಘಾತವಾಗಿಯೋ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ.