ಬಿಹಾರ :ಬಿಸಿಯೂಟದಲ್ಲಿ ಸತ್ತ ಮರಿ ಹಾವು ಪತ್ತೆ: ಆಹಾರ ವಿಷವಾಗಿ 250 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು..!!

ಬಿಹಾರ :ಬಿಸಿಯೂಟದಲ್ಲಿ ಸತ್ತ ಮರಿ ಹಾವು ಪತ್ತೆ: ಆಹಾರ ವಿಷವಾಗಿ 250 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು..!!

SNAKE FOUND IN FOOD

ಸಹರ್ಸಾ (ಬಿಹಾರ): ಜಿಲ್ಲೆಯಿಂದ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಇಲ್ಲಿನ ಮಹಿಷಿ ಬ್ಲಾಕ್‌ನಲ್ಲಿರುವ ಬಲುವಾಹದಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಕ್ಕಳಿಗೆ ನೀಡಿದ ಮಧ್ಯಾಹ್ನದ ಬಿಸಿಯೂಟದಲ್ಲಿ ಮರಿ ಹಾವು ಕಂಡು ಬಂದಿದೆ. ತಿಳಿಯದೇ, ಈ ಆಹಾರ ಸೇವಿಸಿದ ನಂತರ 250 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ. ಮಕ್ಕಳು ಹೊಟ್ಟೆ ನೋವು, ವಾಂತಿ, ತಲೆಸುತ್ತು ಮತ್ತು ವಾಕರಿಕೆಯಿಂದ ಬಳಲಿದ್ದಾರೆ. ಇದು ಶಾಲಾ ಆವರಣದಲ್ಲಿ ತೀವ್ರ ಆತಂಕ ಉಂಟು ಮಾಡಿದೆ.

ಆರೋಗ್ಯ ಕೇಂದ್ರಕ್ಕೆ ದಾಖಲು: ಘಟನೆಯ ನಂತರ ಎಲ್ಲ ಅಸ್ವಸ್ಥ ಮಕ್ಕಳನ್ನು ತಕ್ಷಣವೇ ವೈದ್ಯಕೀಯ ಆರೈಕೆಗಾಗಿ ಸ್ಥಳೀಯ ಮಹಿಷಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಅಲ್ಲಿ ಎಲ್ಲ ಮಕ್ಕಳಿಗೆ ಪ್ರಸ್ತುತ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕ ಆರೋಗ್ಯ ಕೇಂದ್ರದಲ್ಲಿ ಇಷ್ಟೊಂದು ಸಂಖ್ಯೆಯ ಮಕ್ಕಳನ್ನು ಒಂದೇ ಬಾರಿಗೆ ದಾಖಲಿಸಿದ್ದರಿಂದ ಜನಸಂದಣಿಗೆ ಹೆಚ್ಚಿತು. ಇರುವ ಕನಿಷ್ಠ ವೈದ್ಯರ ತಂಡವು ನಿರಂತರವಾಗಿ ಅವರ ಪರೀಕ್ಷೆ ಮತ್ತು ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದೆ.

ಬಿಸಿಯೂಟದಲ್ಲಿ ಕಂಡು ಬಂದ ಸತ್ತ ಮರಿ ಹಾವು
ಬಿಸಿಯೂಟದಲ್ಲಿ ಕಂಡು ಬಂದ ಸತ್ತ ಮರಿ ಹಾವು (ETV Bharat)

ಊಟದ ನಂತರ ಹದಗೆಟ್ಟ ಆರೋಗ್ಯ: ಆಘಾತಕಾರಿ ಘಟನೆಯ ಬಗ್ಗೆ ಐದನೇ ತರಗತಿಯ ವಿದ್ಯಾರ್ಥಿ ರೋಹಿತ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದು, ಶಾಲೆಯಲ್ಲಿ ಕೊಟ್ಟ ಅನ್ನ ಮತ್ತು ಬೇಳೆ ಸಾಂಬಾರು ಸೇವಿಸಿದ ಬಳಿಕ, ಆರೋಗ್ಯ ಹದಗೆಡಲು ಪ್ರಾರಂಭಿಸಿತು. ತೀವ್ರ ಹೊಟ್ಟೆ ನೋವು, ವಾಂತಿ ಮತ್ತು ತಲೆತಿರುಗುವಿಕೆ ಅನುಭವಿಸಿದೆ ಎಂದರು. ಅದೇ ರೀತಿ, ಏಳನೇ ತರಗತಿಯ ವಿದ್ಯಾರ್ಥಿನಿ ಶಿವಾನಿ ಕೂಡ ಊಟದ ನಂತರ ನನ್ನಂತೆ, ಅನೇಕ ಮಕ್ಕಳ ಅನಾರೋಗ್ಯಕ್ಕೆ ತುತ್ತಾದೆವು ಎಂದು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿದವು. ಸಿವಿಲ್ ಸರ್ಜನ್ ಡಾ. ರಾಜನಾರಾಯಣ್ ಪ್ರಸಾದ್, ಇತರ ಆರೋಗ್ಯ ಅಧಿಕಾರಿಗಳೊಂದಿಗೆ, ಮಕ್ಕಳ ಚಿಕಿತ್ಸೆಯನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡಿದರು. ಎಲ್ಲ ಮಕ್ಕಳ ಸ್ಥಿತಿ ಸ್ಥಿರವಾಗಿದೆ. ಸದ್ಯ ಎಲ್ಲವೂ ನಿಯಂತ್ರಣದಲ್ಲಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೋಷಕರಲ್ಲಿ ಆಕ್ರೋಶ: ಈ ಘಟನೆಯು ಪೋಷಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮಸ್ಥರು ಮತ್ತು ಪೋಷಕರು ಶಾಲಾ ಆವರಣದಲ್ಲಿ ಜಮಾಯಿಸಿ, ಕಳಪೆ ಗುಣಮಟ್ಟದ ಆಹಾರ ಮತ್ತು ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಪ್ರತಿಭಟನೆ ನಡೆಸಿದರು. ಸ್ಥಳೀಯ ಆಡಳಿತವು ಘಟನೆಯ ಕುರಿತು ತನಿಖೆ ಪ್ರಾರಂಭಿಸಿದೆ. ಆಹಾರದ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಆಹಾರ ವಿಷವಾದ ಬಗ್ಗೆ ದೂರುಗಳನ್ನು ಸ್ವೀಕರಿಸಲಾಗಿದೆ. ಬಾಧಿತ ಮಕ್ಕಳೆಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಸ್ವಲ್ಪ ಹೆಚ್ಚು ಗಂಭೀರವಾಗಿರುವ ಮಕ್ಕಳನ್ನು ಸಹರ್ಸಾ ಸದರ್ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ಪ್ರಸ್ತುತ, ಎಲ್ಲಾ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಾಯದಿಂದ ಪಾರಾಗಿದ್ದಾರೆ ಎಂದು ಸಹರ್ಸಾ ಸಿವಿಲ್ ಸರ್ಜನ್ ಡಾ. ರಾಜನಾರಾಯಣ್ ಪ್ರಸಾದ್ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article