ಉತ್ತರ ಪ್ರದೇಶ :26 ವರ್ಷದ ಪ್ರೇಮಿಯ ಜೊತೆ ತನ್ನ 37 ವರ್ಷದ ಪತ್ನಿಯ ವಿವಾಹ ಮಾಡಿಸಿಕೊಟ್ಟ ಪತಿ!

ಉತ್ತರ ಪ್ರದೇಶ :26 ವರ್ಷದ ಪ್ರೇಮಿಯ ಜೊತೆ ತನ್ನ 37 ವರ್ಷದ ಪತ್ನಿಯ ವಿವಾಹ ಮಾಡಿಸಿಕೊಟ್ಟ ಪತಿ!

HUSBAND MARRIES WIFE TO LOVER

 ಉತ್ತರಪ್ರದೇಶ: ವ್ಯಕ್ತಿಯೊಬ್ಬರು ತಮ್ಮ ಪತ್ನಿಯನ್ನು ಆಕೆಯ ಪ್ರೇಮಿಯ ಜೊತೆ ದೇವಸ್ಥಾನದಲ್ಲಿ ಮದುವೆ ಮಾಡಿಸಿ ಕಳುಹಿಸಿಕೊಟ್ಟಿರುವ ಅಚ್ಚರಿಯ ಘಟನೆ ಇಲ್ಲಿನ ಸಂತ ಕಬೀರ್​ ನಗರ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಮಹಿಳೆ ಐದು ಮಕ್ಕಳ ತಾಯಿ ಎಂಬುದು ವಿಶೇಷ.

ಕುಟುಂಬಸ್ಥರು ಮತ್ತು ಗ್ರಾಮದ ಮುಖ್ಯಸ್ಥರು ನೀಡಿದ ಮಾಹಿತಿಯ ಪ್ರಕಾರ, ದೆಬ್ರಿ ಗ್ರಾಮದ ಬುದ್ಧಿರಾಮ್​ ನಿಶಾದ್​ (45) ಮತ್ತು ಪೂಲ್ಮತಿ (37) ಸುಮಾರು 21 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ 18 ವರ್ಷದ ಮಗ ಸೇರಿದಂತೆ ಒಟ್ಟು ಐವರು ಮಕ್ಕಳಿದ್ದಾರೆ. ಆದರೆ, ಕೆಲವು ತಿಂಗಳಿಂದ ಪೂಲ್ಮತಿ ಅವರು 26 ವರ್ಷದ ಅವಧೇಶ್​ ಎಂಬ ಯುವಕನ ಪ್ರೇಮಪಾಶದಲ್ಲಿ ಬಿದ್ದಿದ್ದರು. ಇದು ದಂಪತಿ ನಡುವೆ ಕಲಹಕ್ಕೆ ಕಾರಣವಾಗಿತ್ತು.

ಮನೆ ಬಿಟ್ಟು ಓಡಿ ಹೋಗಿದ್ದ ಮಹಿಳೆ: 2 ತಿಂಗಳ ಹಿಂದೆ ಪೂಲ್ಮತಿ ಅವರು ಪ್ರಿಯಕರ ಅವಧೇಶ್​ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದರು. ನಂತರ ಅವರನ್ನು ಹುಡುಕಿ ಮನೆಗೆ ಕರೆತರಲಾಗಿತ್ತು. ಕುಟುಂಬಸ್ಥರು ಮತ್ತು ಗ್ರಾಮಸ್ಥರು ಬುದ್ಧಿವಾದ ಹೇಳಿದ್ದರು. ಆದರೂ, ಮನೆಯಲ್ಲಿ ದಂಪತಿ ಮಧ್ಯೆ ನಿತ್ಯ ಜಗಳ ನಡೆಯುತ್ತಿತ್ತು.

ಈ ಹಿನ್ನೆಲೆಯಲ್ಲಿ, ಪತಿ ಬುದ್ಧಿರಾಮ್​ ಅವರು ಪತ್ನಿಯ ಹಠ ಮತ್ತು ಕಿರಿಕಿರಿಗೆ ಬೇಸತ್ತು ಆಕೆಯ ಪ್ರೇಮಿಯ ಜೊತೆ ವಿವಾಹ ಮಾಡಿಸಲು ನಿರ್ಧರಿಸಿದ್ದರು. ಅದರಂತೆ, ಮಂಗಳವಾರ (ಆಗಸ್ಟ್​ 4) ಗ್ರಾಮದ ಶಿವನ ದೇವಸ್ಥಾನದಲ್ಲಿ ಊರ ಜನರ ಸಮ್ಮುಖದಲ್ಲಿ ಇಬ್ಬರಿಗೆ ವಿವಾಹ ಮಾಡಿಸಿದ್ದಾರೆ. ಸ್ವತಃ ಪತಿಯೇ ವಿವಾಹದ ಎಲ್ಲ ಸಿದ್ಧತೆ ನಡೆಸಿ, ಸಾಂಪ್ರದಾಯಿಕವಾಗಿ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೆ ಬೀಳ್ಕೊಟ್ಟಿದ್ದಾರೆ.


ಪತಿ ಹೇಳಿದ್ದಿಷ್ಟು? ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪತಿ ಬುದ್ಧಿರಾಮ್​, "21 ವರ್ಷಗಳ ಹಿಂದೆ ಪೂಲ್ಮತಿಯನ್ನು ಪ್ರೀತಿಸಿ ವಿವಾಹವಾಗಿದ್ದೆ. ಆದರೆ, ಈಗ ಆಕೆಗೆ ನನ್ನೊಂದಿಗೆ ಬದುಕಲು ಇಷ್ಟವಿಲ್ಲ. ನಿತ್ಯ ಮನೆಯಲ್ಲಿ ಜಗಳವಾಡುತ್ತಿದ್ದಳು. ಇದು ನನಗೆ ಬೇಸರ ತರಿಸಿತ್ತು. ಅದಕ್ಕಾಗಿ ಆಕೆ ಯಾರೊಂದಿಗೆ ಬಾಳಲು ಬಯಸುತ್ತಾಳೋ, ಅವರ ಜೊತೆ ಮದುವೆ ಮಾಡಿಸಲು ನಿರ್ಧರಿಸಿದೆ. ಇಬ್ಬರಿಗೂ ವಿವಾಹ ಮಾಡಿ ಕಳುಹಿಸಿದ್ದೇನೆ. ಇಬ್ಬರೂ ತಮ್ಮಿಷ್ಟದಂತೆ ಬದುಕಲಿ. ನಾನು ಮಕ್ಕಳನ್ನು ನೋಡಿಕೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.



Ads on article

Advertise in articles 1

advertising articles 2

Advertise under the article