ಬೆಂಗಳೂರು :ಎಐ (AI) ಸುಂದರಿಯ ಬಲೆಗೆ ಬಿದ್ದ ಯುವಕ; ಬಟ್ಟೆ ಬಿಚ್ಚಿ ವೀಡಿಯೋ ಕಾಲ್ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ಅಮಾಯಕ..!

ಬೆಂಗಳೂರು :ಎಐ (AI) ಸುಂದರಿಯ ಬಲೆಗೆ ಬಿದ್ದ ಯುವಕ; ಬಟ್ಟೆ ಬಿಚ್ಚಿ ವೀಡಿಯೋ ಕಾಲ್ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ಅಮಾಯಕ..!

ಬೆಂಗಳೂರು: ಆನ್‌ಲೈನ್‌ನಲ್ಲಿ ಅಪರಿಚಿತರ ಜೊತೆ ವ್ಯವಹರಿಸುವಾಗ ಎಷ್ಟೇ ಜಾಗರೂಕರಾಗಿದ್ದರೂ ಸೈಬರ್ ಖದೀಮರು ಹೊಸ ಹೊಸ ತಂತ್ರಗಳ ಮೂಲಕ ಗಾಳ ಹಾಕುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ 26 ವರ್ಷದ ಯುವಕನೊಬ್ಬ ಸೈಬರ್ ಸುಲಿಗೆಗೆ ಒಳಗಾಗಿದ್ದು, ತನಿಖೆ ವೇಳೆ ಆಕೆ ಮನುಷ್ಯಳಲ್ಲ, ಕೃತಕ ಬುದ್ಧಿಮತ್ತೆಯ (AI) ಹೆಣ್ಣಿನ ಅವತಾರ ಎಂಬುದು ತಿಳಿದು ಆಘಾತಕ್ಕೊಳಗಾಗಿದ್ದಾನೆ.

ಘಟನೆಯ ವಿವರ

ಯುವಕನೊಬ್ಬ ಡೇಟಿಂಗ್ ಆ್ಯಪ್‌ನಲ್ಲಿ ‘ಇಶಾನಿ’ ಎಂಬ ಹೆಸರಿನ ಸುಂದರಿಯ ಪರಿಚಯ ಬೆಳೆಸಿಕೊಂಡಿದ್ದನು. ಇಬ್ಬರ ನಡುವೆ ಮಾತು ಬೆಳೆದು ಸಲುಗೆ ಹೆಚ್ಚಾದ ನಂತರ, ಆಕೆ ವಿಡಿಯೋ ಕಾಲ್ ಮಾಡಿ ನಗ್ನವಾಗಿ ಕಾಣಿಸಿಕೊಂಡಿದ್ದಾಳೆ. ಬಳಿಕ ಯುವಕನಿಗೂ ತನ್ನ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸುವಂತೆ ಪ್ರಚೋದಿಸಿದ್ದಾಳೆ. ಯುವಕ ಫೋಟೋ ಮತ್ತು ವಿಡಿಯೋ ಕಳುಹಿಸುತ್ತಿದ್ದಂತೆಯೇ ಆಕೆಯ ಅಸಲಿ ಆಟ ಶುರುವಾಗಿದೆ.

ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು 2 ಲಕ್ಷ ರೂಪಾಯಿ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಮರ್ಯಾದೆಗೆ ಅಂಜಿ ಯುವಕ ಆರಂಭದಲ್ಲಿ ಹಣ ವರ್ಗಾಯಿಸಿದ್ದರೂ, ಆಕೆ ಮತ್ತೆ ಮತ್ತೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಕೊನೆಗೆ ಬೇರೆ ದಾರಿಯಿಲ್ಲದೆ ಯುವಕ ಬೆಂಗಳೂರಿನ ಸೆಂಟ್ರಲ್ ಸಿಇಎನ್ (CEN) ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.

ತನಿಖೆಯಲ್ಲಿ ಬೆಚ್ಚಿಬಿದ್ದ ಪೊಲೀಸರು

ಯುವಕ ನೀಡಿದ ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಕಳವಳಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಯುವಕನಿಗೆ ವೀಡಿಯೋ ಕಾಲ್‌ನಲ್ಲಿ ಕಾಣಿಸಿಕೊಂಡ ‘ಇಶಾನಿ’ ಎಂಬ ಸುಂದರಿ ಯಾವುದೇ ನೈಜ ಮಹಿಳೆಯಾಗಿರಲಿಲ್ಲ. ಬದಲಾಗಿ, ಸೈಬರ್ ಅಪರಾಧಿಗಳ ಜಾಲವು ಎಐ (Artificial Intelligence) ತಂತ್ರಜ್ಞಾನ ಬಳಸಿ ರಚಿಸಿದ್ದ ಡಿಜಿಟಲ್ ಅವತಾರವಾಗಿತ್ತು. ಸದ್ಯ ಪೊಲೀಸರು ಐಪಿಒ ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಬ್ಯಾಂಕ್ ವಹಿವಾಟು ಹಾಗೂ ಯುಪಿಐ ಐಡಿಗಳ ಮೂಲಕ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಸೈಬರ್ ಪೊಲೀಸರ ಎಚ್ಚರಿಕೆ

“ಡೇಟಿಂಗ್ ಆ್ಯಪ್‌ಗಳಲ್ಲಿ ಅಪರಿಚಿತರೊಂದಿಗೆ ಸಂವಹನ ನಡೆಸುವಾಗ ತೀವ್ರ ಜಾಗರೂಕತೆ ವಹಿಸಬೇಕು. ಖಾಸಗಿ ವೀಡಿಯೋ ಕಾಲ್‌ಗಳಲ್ಲಿ ತೊಡಗುವುದು ಅಥವಾ ಖಾಸಗಿ ಫೋಟೋಗಳನ್ನು ಹಂಚಿಕೊಳ್ಳುವುದು ಅಪಾಯಕಾರಿ. ಎಐ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಸೈಬರ್ ಸುಲಿಗೆ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಆನ್‌ಲೈನ್‌ನಲ್ಲಿ ಜಾಗರೂಕರಾಗಿರಬೇಕು” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article