ಉತ್ತರಪ್ರದೇಶ :ತವರುಮನೆಯಿಂದ ಸಿಕ್ಕ ಆಸ್ತಿ ಮಾರಲು ಒಪ್ಪದ ಪತ್ನಿಯ ಖಾಸಗಿ ಭಾಗಕ್ಕೆ ಕರೆಂಟ್ ಶಾಕ್ ಕೊಟ್ಟು ಕೊಂದ ಪತಿ!
ರಾಂಪುರ (ಉತ್ತರ ಪ್ರದೇಶ): ಹೆತ್ತವರು ನೀಡಿದ್ದ ಜಮೀನನ್ನು ಮಾರಾಟ ಮಾಡಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯ ಖಾಸಗಿ ಅಂಗಗಳಿಗೆ ವಿದ್ಯುತ್ ಹರಿಸಿ ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ.ಕೊಲೆಯಾದ ದುರ್ದೈವಿ ಮಹಿಳೆಯನ್ನು ನಸ್ರೀನ್ (38) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಇಸ್ರಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ದಂಪತಿಗೆ 13 ವರ್ಷಗಳ ಹಿಂದೆ ಮದುವೆಯಾಗಿದ್ದು, ನಾಲ್ವರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ.
ನಸ್ರೀನ್ ಅವರಿಗೆ ಹೆತ್ತವರಿಂದ ಬಳುವಳಿಯಾಗಿ ಬಂದಿದ್ದ ಜಮೀನನ್ನು ಮಾರಾಟ ಮಾಡುವಂತೆ ಇಸ್ರಾರ್ ಒತ್ತಾಯಿಸುತ್ತಿದ್ದ. ಆದರೆ, ಐವರು ಮಕ್ಕಳ ಭವಿಷ್ಯಕ್ಕಾಗಿ ಜಮೀನು ಮಾರಾಟ ಮಾಡಲು ನಸ್ರೀನ್ ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಇಸ್ರಾರ್, ಆಕೆಯ ಮೇಲೆ ಪದೇ ಪದೇ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕುತ್ತಿದ್ದ.
ಇತ್ತೀಚೆಗೆ ಜಗಳ ವಿಕೋಪಕ್ಕೆ ತಿರುಗಿ, ಇಸ್ರಾರ್ ನಸ್ರೀನ್ ಆಕೆಯ ಖಾಸಗಿ ಅಂಗಗಳು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ವಿದ್ಯುತ್ ಶಾಕ್ ನೀಡಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಘಟನೆಗೆ ಸಂಬಂಧಿಸಿ ಪೊಲೀಸರು ಇಸ್ರಾರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ನಸ್ರೀನ್ ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೇಹದ 6 ಕಡೆಗಳಲ್ಲಿ ತೀವ್ರವಾದ ಸುಟ್ಟ ಗಾಯಗಳಾಗಿರುವುದು ಮತ್ತು ಖಾಸಗಿ ಭಾಗಗಳಿಗೆ ವಿದ್ಯುತ್ ಶಾಕ್ ನೀಡಲಾಗಿರುವುದು ದೃಢಪಟ್ಟಿದೆ ಎಂದು ರಾಂಪುರ ಗಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಸಿಂಗ್ ತಿಳಿಸಿದ್ದಾರೆ.
ಮೃತಳ ಚಿಕ್ಕಪ್ಪ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆಯಲ್ಲಿ ಇಸ್ರಾರ್ ಕುಟುಂಬಸ್ಥರ ಪಾತ್ರವೂ ಇದೆಯೇ ಎಂಬ ಕೋನದಲ್ಲಿ ತನಿಖೆ ಮುಂದುವರಿಸಿದ್ದಾರೆ.