ವಿಟ್ಲ: ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ: ಮೂವರ ಬಂಧನ, 12ಕ್ಕೂ ಹೆಚ್ಚು ಆರೋಪಿಗಳಿಗಾಗಿ ಶೋಧ.

ವಿಟ್ಲ: ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ: ಮೂವರ ಬಂಧನ, 12ಕ್ಕೂ ಹೆಚ್ಚು ಆರೋಪಿಗಳಿಗಾಗಿ ಶೋಧ.

ವಿಟ್ಲ: 12 ವರ್ಷದ ಅಪ್ರಾಪ್ತ ಬಾಲಕನಿಗೆ ಆಮಿಷವೊಡ್ಡಿ ವಿವಿಧ ಸ್ಥಳಗಳಿಗೆ ಕರೆದೊಯ್ದು ಸರಣಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ 12ಕ್ಕೂ ಹೆಚ್ಚು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಬಂಧಿತರನ್ನು ಕೊಳ್ನಾಡು ಗ್ರಾಮದ ಕಾಡುಮಠ ಅಳ್ಳಿಕಂಡೆ ನಿವಾಸಿ ಜಾವಾದ್ (32), ಸಾಲೆತ್ತೂರು ಕಟ್ಟೆ ಕಾಲೋನಿ ನಿವಾಸಿ ಸಾಹಿದ್ (32) ಹಾಗೂ ಸಾಲೆತ್ತೂರು ಕಟ್ಟೆ ನಿವಾಸಿ ರಿಯಾರ್ಝ್ ಅಲಿಯಾಸ್ ಅಬ್ದುಲ್ ಗಫೂರ್ (42) ಎಂದು ಪೊಲೀಸರು ತಿಳಿಸಿದ್ದಾರೆ.

ಆಮಿಷವೊಡ್ಡಿ ದೌರ್ಜನ್ಯ ಆರೋಪ

ಪೊಲೀಸರ ಪ್ರಕಾರ, ಬಾಲಕನಿಗೆ ವಿವಿಧ ರೀತಿಯ ಆಮಿಷವೊಡ್ಡಿ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಪ್ರತ್ಯೇಕವಾಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಈ ಕೃತ್ಯದಲ್ಲಿ 15ಕ್ಕೂ ಹೆಚ್ಚು ಮಂದಿ ಭಾಗಿಯಾಗಿರುವ ಬಗ್ಗೆ ಬಾಲಕನ ಹೇಳಿಕೆಯಿಂದ ಮಾಹಿತಿ ಲಭಿಸಿದೆ ಎನ್ನಲಾಗಿದೆ.

ಬಾಲಕ ಅಸ್ವಸ್ಥಗೊಂಡು ಆತನ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದ ಹಿನ್ನೆಲೆಯಲ್ಲಿ ಪೋಷಕರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಪೋಷಕರು ಮಕ್ಕಳ ಸಹಾಯವಾಣಿ 1098ಕ್ಕೆ ಸಂಪರ್ಕಿಸಿ ದೂರು ನೀಡಿದ್ದಾರೆ.

POCSO ಕಾಯ್ದೆಯಡಿ ಪ್ರಕರಣ ದಾಖಲು

ಮಕ್ಕಳ ಕಲ್ಯಾಣ ಸಮಿತಿ (CWC) ಅಧಿಕಾರಿಗಳು ಬಾಲಕನ ಹೇಳಿಕೆಯನ್ನು ದಾಖಲಿಸಿಕೊಂಡ ಬಳಿಕ ನೀಡಿದ ನಿರ್ದೇಶನದ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ POCSO ಕಾಯ್ದೆಯಡಿ ಪ್ರತ್ಯೇಕ ಪ್ರಕರಣಗಳು ದಾಖಲಿಸಲಾಗಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನೂ ತಲೆಮರೆಸಿಕೊಂಡಿರುವ 12ಕ್ಕೂ ಹೆಚ್ಚು ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಸಂತ್ರಸ್ತ ಬಾಲಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಪ್ರಕರಣದ ಕುರಿತು ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ.

Ads on article

Advertise in articles 1

advertising articles 2

Advertise under the article