ಬೆಳಗಾವಿ :ಕೋಟ್ಯಂತರ ಮೌಲ್ಯದ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ವಂಚನೆ: 80 ವರ್ಷದ ಕಿಲಾಡಿ ವೃದ್ಧೆ ಕೊನೆಗೂ ಅರೆಸ್ಟ್!

ಬೆಳಗಾವಿ: ಪರರ ಜಮೀನುಗಳನ್ನು ತನ್ನದೇ ಎಂದು ಬಿಂಬಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ 80 ವರ್ಷದ ವೃದ್ಧೆಯನ್ನು ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಡಗಾಂವ ಗಣೇಶ ಕಾಲೋನಿ ನಿವಾಸಿ ಮಂದಾಕಿನಿ ಪರಿಶವಾಡಕರ್ ಬಂಧಿತ ವೃದ್ಧೆಯಾಗಿದ್ದಾಳೆ.
ಕಣಬರ್ಗಿ ರಸ್ತೆಯ ಮಹಾಂತೇಶ ನಗರದಲ್ಲಿರುವ ಪ್ಲಾಟ್ ನಂ.2313 ಹಾಗೂ ಸಿಟಿಎಸ್ ನಂ.944ರ ಜಾಗವು ರತ್ನಾ ಯಶವಂತ ಮಲ್ಯೂಕರ ಅವರಿಗೆ ಸೇರಿದ್ದಾಗಿತ್ತು. ಈ ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡುವ ಉದ್ದೇಶದಿಂದ ಮಂದಾಕಿನಿ, ರತ್ನಾ ಅವರಂತೆ ನಟಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಳು. 2003ರಲ್ಲಿ ಬೆಳಗಾವಿ ಉತ್ತರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ರತ್ನಾ ಅವರ ಹೆಸರಿನಲ್ಲೇ ಫೋಟೋ, ಸಹಿ ಹಾಗೂ ಹೆಬ್ಬೆರಳ ಗುರುತು ನೀಡಿ ಜಾಗವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಳು.
ಖಾತೆದಾರರ ಗಮನಕ್ಕೆ ವಿಷಯ ಬಂದ ನಂತರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವಿಚಾರಣೆ ನಡೆಸಿದಾಗ ವೃದ್ಧೆಯ ಅಕ್ರಮಗಳು ಬಯಲಾಗಿವೆ. ಈ ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ರಾಹುಲ್ ಅನೀಲ ಮಗದುಮ್ ಎಂಬಾತನ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.