ಮುಂಬೈ :ಚಾಟ್ ಜಿಪಿಟಿ ಬಳಸಿ ನಕಲು ಮಾಡಿ ಸಿಕ್ಕಿಬಿದ್ದ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ ;ವಿದ್ಯಾರ್ಥಿಗಳಿಂದ ತೀವ್ರ ಪ್ರತಿಭಟನೆ..!

ಮುಂಬೈ :ಐಐಟಿ ಬಾಂಬೆಯ ಎರಡನೇ ವರ್ಷದ ವಿದ್ಯಾರ್ಥಿಯೊಬ್ಬ ಚಾಟ್ ಜಿಪಿಟಿ ಬಳಸಿ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಾಗ ಸಿಕ್ಕಿಬಿದ್ದ ಅವಮಾನದಿಂದ ಶುಕ್ರವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮುಂಬೈಯ ಪೊವಾಯಿಲ್ಲಿರುವ ಐಐಟಿ ಕ್ಯಾಂಪಸ್‌ನಲ್ಲಿ ಕಳೆದ ಆರು ತಿಂಗಳಲ್ಲಿ ನಡೆದ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.
ಎನರ್ಜಿ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿಭಾಗದ ಸಾಹಿಲ್ ವಾಕೋಡೆ ಎಂದು ಗುರುತಿಸಲಾದ ಈ ವಿದ್ಯಾರ್ಥಿ ಪರೀಕ್ಷೆಯ ಸಮಯದಲ್ಲಿ ಉತ್ತರಗಳನ್ನು ಪಡೆಯಲು ಪ್ರಶ್ನೆ ಪತ್ರಿಕೆಯನ್ನು ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿದ್ದ. ಆದರೆ ವಿದ್ಯಾರ್ಥಿಯ ವಿರುದ್ಧ ಯಾವುದೇ ಶಿಸ್ತು ಕ್ರಮ ಜರುಗಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಷಯದ ಕುರಿತು ಬೋಧಕರು ಮತ್ತು ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿಯೊಂದಿಗೆ ಚರ್ಚಿಸಿ, ಆತನಿಗೆ ಕೌನ್ಸೆಲಿಂಗ್ ನೀಡಿದ್ದರು. ಅಲ್ಲದೆ ಈ ಘಟನೆಯಿಂದ ಆತನ ಶೈಕ್ಷಣಿಕ ವೃತ್ತಿಜೀವನದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿದ್ದರು.
ಈ ಚರ್ಚೆಯ ನಂತರ ವಿದ್ಯಾರ್ಥಿ ತನ್ನ ಹಾಸ್ಟೆಲ್ ಕೊಠಡಿಗೆ ಹಿಂತಿರುಗಿದ್ದನು. ಆದರೆ ಸಂಜೆಯ ವೇಳೆಗೆ ಆತ ತನ್ನ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಐಐಟಿ ಬಾಂಬೆ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ವಿದ್ಯಾರ್ಥಿಯ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ವಿದ್ಯಾರ್ಥಿಗಳಿಂದ ಪ್ರತಿಭಟನೆ
ವಾಕೋಡೆ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ ಐಐಟಿ ಪೊವಾಯಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದರು. ಘಟನೆಗೆ ಸಂಬಂಧಿಸಿದ ಪೂರ್ಣ ಸತ್ಯಾಂಶವನ್ನು ಸಂಸ್ಥೆ ಬಹಿರಂಗಪಡಿಸುತ್ತಿಲ್ಲ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ನಕಲು ಹೊಡೆದ ಆರೋಪ ಹೊತ್ತಿದ್ದ ವಿದ್ಯಾರ್ಥಿಗೆ ಒಂದು ವರ್ಷ ಅಮಾನತುಗೊಳಿಸುವ ಬೆದರಿಕೆ ಹಾಕಲಾಗಿತ್ತು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಮಾನತುಗೊಂಡಿದ್ದರೆ, ಆ ವಿದ್ಯಾರ್ಥಿಯು ಹಾಸ್ಟೆಲ್ ಖಾಲಿ ಮಾಡಿ ಕ್ಯಾಂಪಸ್‌ನಿಂದ ಹೊರಗೆ ಇರಬೇಕಾಗುತ್ತಿತ್ತು. ಇದರೊಂದಿಗೆ, ಆತನ ಇಂಜಿನಿಯರಿಂಗ್ ಕೋರ್ಸ್ ನಾಲ್ಕು ವರ್ಷಗಳಿಂದ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ವಿಸ್ತರಣೆಯಾಗುವ ಸಾಧ್ಯತೆಯಿತ್ತು ಎಂದು ಅವರು ತಿಳಿಸಿದ್ದಾರೆ.
ಶಿಸ್ತು ಕ್ರಮದ ಭಯ ಮತ್ತು ಒತ್ತಡ ವಾಕೋಡೆ ಈ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದು ಮೊದಲ ಘಟನೆಯಲ್ಲ, ಈ ವರ್ಷದಲ್ಲೇ ನಾಲ್ಕು ಪ್ರಕರಣಗಳು ನಡೆದಿವೆ, ಮತ್ತು ಕಳೆದ ಎರಡು ತಿಂಗಳಲ್ಲಿ ಎರಡು ಘಟನೆಗಳು ಸಂಭವಿಸಿವೆ. ಇವೆಲ್ಲದರ ಹಿಂದಿನ ಕಾರಣ ಏನೆಂದು ನಮಗೆ ತಿಳಿಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯ ನಡುವೆ ಮಾತುಕತೆ ನಡೆಯುತ್ತಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಕ್ಯಾಂಪಸ್‌ನಲ್ಲಿ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ.