ಮಂಗಳೂರು :ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆ ತುಳು: ಕ್ಯಾಬಿನೆಟ್ ನಿರ್ಧಾರ.

ಮಂಗಳೂರು: ಕರಾವಳಿ ಜನರ ದಶಕಗಳ ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸಚಿವ ಸಂಪುಟವು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವಂತೆ ‘ತುಳು’ ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಲು ಮಹತ್ವದ ತೀರ್ಮಾನ ಕೈಗೊಂಡಿದೆ.
ಇದರೊಂದಿಗೆ, ‘ದಕ್ಷಿಣ ಕನ್ನಡ’ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯ ಆಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿ ಕರಡು ಅಧಿಸೂಚನೆ (Draft Notification) ಹೊರಡಿಸಲು ನಿರ್ಧರಿಸಲಾಗಿದೆ.
ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ದಲ್ಲಿ ಶುಕ್ರವಾರ ನಡೆದ ಐತಿಹಾಸಿಕ ಸಂಪುಟ ಸಭೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು. ಕರಾವಳಿ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಸಂಪುಟ ಸಭೆಯಲ್ಲಿ ಒಟ್ಟು 32,611 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು:
ತುಳು ಹೆಚ್ಚುವರಿ ಅಧಿಕೃತ ಭಾಷೆ:
ದಕ್ಷಿಣ ಕನ್ನಡ ಮತ್ತು ಉಡುಪಿ ಅವಿಭಜಿತ ಜಿಲ್ಲೆಯ ಜನರ ದೀರ್ಘಕಾಲದ ಕನಸಾಗಿದ್ದ ತುಳು ಭಾಷೆಗೆ ಎರಡೂ ಜಿಲ್ಲೆಗಳ ಮಟ್ಟಿಗೆ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ.
‘ಮಂಗಳೂರು ಜಿಲ್ಲೆ’ ಮರುನಾಮಕರಣಕ್ಕೆ ಸಾರ್ವಜನಿಕ ಚರ್ಚೆ:
ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಕರೆಯಬೇಕೆಂಬ ಪ್ರಸ್ತಾವನೆಗೆ ಸರ್ಕಾರದ ಒಲವಿದೆ. ಆದರೆ, ಜನರ ಮತ್ತು ಸಂಘ – ಸಂಸ್ಥೆಗಳ ಅಭಿಪ್ರಾಯ ಪಡೆಯಲು ಒಂದು ತಿಂಗಳ ಕಾಲ ಕರಡು ಅಧಿಸೂಚನೆ ಪ್ರಕಟಿಸಿ ಸಾರ್ವಜನಿಕ ಸಂವಾದಕ್ಕೆ (Public Debate) ಮುಕ್ತ ಅವಕಾಶ ನೀಡಲಾಗುವುದು.
32,611 ಕೋಟಿ ರೂ. ಮೊತ್ತದ ಯೋಜನೆಗಳು: ಸಂಪುಟ ಸಭೆಯಲ್ಲಿ ಒಟ್ಟು 32,611 ಕೋಟಿ ರೂ. ಅನುದಾನದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಲ್ಲಿ 16,000 ಕೋಟಿ ರೂ. ಗ್ರಾಮೀಣಾಭಿವೃದ್ಧಿಗೆ ಹಾಗೂ ಉಳಿದ 16,000 ಕೋಟಿಗೂ ಅಧಿಕ ಮೊತ್ತವನ್ನು ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದ ರಸ್ತೆ, ಮೂಲಸೌಕರ್ಯ, ಬಂದರು ಹಾಗೂ ನಗರಾಭಿವೃದ್ಧಿ ಯೋಜನೆಗಳಿಗೆ ಮೀಸಲಿಡಲಾಗಿದೆ.
ಮಲೆನಾಡು – ಕರಾವಳಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ:
320 ಕಿ.ಮೀ ಕರಾವಳಿ ತೀರ, ದ್ವೀಪಗಳು ಹಾಗೂ ಮಲೆನಾಡಿನ ಹವಾಮಾನವನ್ನು ಪರಿಗಣಿಸಿ ಪ್ರತ್ಯೇಕ ಹಾಗೂ ಅತ್ಯಾಕರ್ಷಕ ‘ಟೂರಿಸಂ ಪಾಲಿಸಿ’ ರೂಪಿಸಲಾಗಿದೆ. ಗ್ರೀನ್‌ಫೀಲ್ಡ್ ಪ್ರಾಜೆಕ್ಟ್‌ಗಳು ಹಾಗೂ ಹೂಡಿಕೆದಾರರಿಗೆ ದೀರ್ಘಾವಧಿಯ ಸಾಲ ಮರುಪಾವತಿ ವಿನಾಯಿತಿ ಮತ್ತು ಉತ್ತೇಜನ ನೀಡಲು ಇದನ್ನು ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಮಾದರಿಯಲ್ಲಿ ಜಾರಿಗೊಳಿಸಲಾಗುವುದು.
ಫಿಶರೀಸ್ ಮತ್ತು ಬ್ಲೂ ಎಕಾನಮಿ ವಿಶ್ವವಿದ್ಯಾಲಯ:
ಮಂಗಳೂರಿನಲ್ಲಿ ಸಮುದ್ರ ವಿಜ್ಞಾನ ಹಾಗೂ ನೀಲಿ ಆರ್ಥಿಕತೆಗೆ (Blue Economy) ಒತ್ತು ನೀಡಲು ಪ್ರತ್ಯೇಕ ‘ಫಿಶರೀಸ್ ಮತ್ತು ಬ್ಲೂ ಎಕಾನಮಿ ಯೂನಿವರ್ಸಿಟಿ’ ಸ್ಥಾಪಿಸಲಾಗುವುದು. ಇದರಲ್ಲಿ ಪ್ರಸ್ತುತ ಇರುವ 60 ಸೀಟುಗಳನ್ನು 200 ಸೀಟುಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ಪುತ್ತೂರಿನಲ್ಲಿ 450 ಕೋಟಿ ರೂ. ವೆಚ್ಚದ ಮೆಡಿಕಲ್ ಕಾಲೇಜು:
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ಮೊದಲ ಪ್ರಶ್ನೆ ಹಾಗೂ ಜನರ ಆಶಯದಂತೆ ಪುತ್ತೂರಿನಲ್ಲಿ ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ನೂತನ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ. ಜೊತೆಗೆ ಮಂಗಳೂರಿನಲ್ಲಿ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗಳ ವಿಸ್ತರಣೆಗೂ ಅನುಮೋದನೆ ದೊರೆತಿದೆ.
ರಾಜ್ಯಾದ್ಯಂತ ಸಂಪುಟ ಸಭೆಗಳ ವಿಸ್ತರಣೆ:
ಮುಂದಿನ 15 ತಿಂಗಳಲ್ಲಿ ಬೆಂಗಳೂರಿನಿಂದ ಹೊರಗೆ ರಾಜ್ಯದ 10 ರಿಂದ 12 ವಿವಿಧ ಸ್ಥಳಗಳಲ್ಲಿ ಇದೇ ಮಾದರಿಯಲ್ಲಿ ಸಂಪುಟ ಸಭೆಗಳನ್ನು ನಡೆಸಿ ‘ಸಮಗ್ರ ಕರ್ನಾಟಕ, ಸಮೃದ್ಧ ಕರ್ನಾಟಕ’ ನಿರ್ಮಾಣಕ್ಕೆ ಒತ್ತು ನೀಡಲಾಗುವುದು.
“ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ, ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಕರಾವಳಿಯ ಶೈಕ್ಷಣಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.