ಉಳ್ಳಾಲ : ನವರಾತ್ರಿಗೆ ಯಕ್ಷವೇಷ ಧರಿಸಿ ಗಳಿಸಿದ 2 ಲಕ್ಷ ದೇಣಿಗೆ 4 ವರ್ಷದ ಮಗುವಿನ ಶಸ್ತ್ರಚಿಕಿತ್ಸೆಗೆ ಸಮರ್ಪಣೆ ; 'ಭವತೀ ಭಿಕ್ಷಾಂ ದೇಹಿ' ಪರಿಕಲ್ಪನೆಯಡಿ ಉಳ್ಳಾಲದ ಟೀಮ್ ಹನುಮಾನ್ ತಂಡದ ಸೇವೆ.

ಉಳ್ಳಾಲ : ನವರಾತ್ರಿಗೆ ಯಕ್ಷವೇಷ ಧರಿಸಿ ಗಳಿಸಿದ 2 ಲಕ್ಷ ದೇಣಿಗೆ 4 ವರ್ಷದ ಮಗುವಿನ ಶಸ್ತ್ರಚಿಕಿತ್ಸೆಗೆ ಸಮರ್ಪಣೆ ; 'ಭವತೀ ಭಿಕ್ಷಾಂ ದೇಹಿ' ಪರಿಕಲ್ಪನೆಯಡಿ ಉಳ್ಳಾಲದ ಟೀಮ್ ಹನುಮಾನ್ ತಂಡದ ಸೇವೆ.

ಉಳ್ಳಾಲ, ಅ.25: ಉಳ್ಳಾಲ ಧರ್ಮನಗರದ ಟೀಮ್
ಹನುಮಾನ್ ಸಂಘಟನೆಯ ಯುವಕರು ಕಳೆದ ಐದು ವರ್ಷದಿಂದ ನಿರಂತರವಾಗಿ ನವರಾತ್ರಿ ಉತ್ಸವಕ್ಕೆ ಯಕ್ಷ ವೇಷ ಧರಿಸಿ, ದಾನಿಗಳಿಂದ ಸಂಗ್ರಹಿಸಿದ ಹಣವನ್ನ ಸಮಾಜದ ಅಶಕ್ತ ವರ್ಗದ ಒಳಿತಿಗಾಗಿ ವಿನಿಯೋಗಿಸುತ್ತ ಬಂದಿದ್ದಾರೆ. ಈ ಬಾರಿ ನವರಾತ್ರಿ ಸಂದರ್ಭದಲ್ಲಿ "ಭವತೀ ಭಿಕ್ಷಾಂ ದೇಹಿ" ಪರಿಕಲ್ಪನೆಯಡಿ ಜನರಿಂದ ಕ್ರೋಢೀಕರಿಸಿದ 2,01,674 ರೂಪಾಯಿಗಳನ್ನು ವಾಕ್ ಮತ್ತು ಶ್ರವಣ ಸಮಸ್ಯೆಯಿಂದ ಪಲ್ಲಮಜಲುವಿನ ಬಳಲುತ್ತಿರುವ ಬಂಟ್ವಾಳದ ಆನಂದ ಪೂಜಾರಿ, ಯಶೋಧ ದಂಪತಿಯ ನಾಲ್ಕು ವರ್ಷದ ಪುತ್ರಿ ನವ್ಯಾ ಅವರ ಶಸ್ತ್ರ ಚಿಕಿತ್ಸೆಗಾಗಿ ನೀಡಿ ಮಾದರಿ ಕಾರ್ಯ ನಡೆಸಿದ್ದಾರೆ.

ಉಳ್ಳಾಲ ಧರ್ಮನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕರಾದ ಮಂಜಪ್ಪ ಕಾರ್ನವರ್ ಅವರು ನವ್ಯ ಅವರ ಕುಟುಂಬಕ್ಕೆ ಸಹಾಯ ಧನದ ಚೆಕ್ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಮಂಜಪ್ಪ ಕಾರ್ನವರ್ ಅವರು ಯುವಕರನ್ನೇ ಒಳಗೊಂಡಿರುವ ಟೀಮ್ ಹನುಮಾನ್ ಎಂಬ ಸಣ್ಣ ಸಂಘಟನೆ ಕಳೆದ ಐದು ವರುಷಗಳಿಂದ ನಿರಂತರವಾಗಿ ನವರಾತ್ರಿ ವೇಳೆ ವೇಷ ಧರಿಸಿ ಗಳಿಸಿದ ಸುಮಾರು ಏಳು ಲಕ್ಷಕ್ಕೂ ಅಧಿಕ ಹಣವನ್ನು ಸಮಾಜದ ಅಶಕ್ತ ವರ್ಗದವರಿಗೆ ನೀಡಿ ದೊಡ್ಡ ಸೇವಾ ಕಾರ್ಯವನ್ನು ನಡೆಸಿರುವುದು ಎಲ್ಲರಿಗೂ ಮಾದರಿಯಾಗಿದೆ. ಎಲ್ಲಾ ಯುವಕರು ಇದೇ ರೀತಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿದಲ್ಲಿ ಸಮಾಜದ ಸರ್ವತೋಮುಖ ಏಳಿಗೆ ಸಾಧ್ಯವೆಂದರು.
ಉಳ್ಳಾಲ ಶಾರದೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀಕಾಂತ್ ಬಂಗೇರ ಅರಸುಹಿತ್ತು ಮಾತನಾಡಿ ತಾವು ನೀಡಿದ್ದು ಅರ್ಹರಿಗೆ ತಲುಪುತ್ತದೆ ಎಂಬ ದೃಢ ವಿಶ್ವಾಸದಿಂದ ಜನಸಾಮಾನ್ಯರು ಟೀಮ್ ಹನುಮಾನ್ ಸಂಘಟನೆಯ ವೇಷಧಾರಿಗಳಿಗೆ ಉದಾರ ದೇಣಿಗೆ ನೀಡುತ್ತಿದ್ದಾರೆ. ಅನೇಕ ಕಡೆ ಸಂಘ, ಸಂಸ್ಥೆಗಳ ಹೆಸರಿನಲ್ಲಿ ಚಂದಾ ಕ್ರೋಢೀಕರಿಸಿ ಅದನ್ನ ದುರುಪಯೋಗ ಪಡಿಸಿರುವ ಸಾಕಷ್ಟು ನಿದರ್ಶನಗಳಿವೆ. ಆದರೆ ಟೀಮ್ ಹನುಮಾನ್ ತಂಡವು ಹನ್ನೆರಡು ವರುಷಗಳಿಂದ ಸಮಾಜಮುಖಿ ಕಾರ್ಯಗಳನ್ನ ನಡೆಸಿ ಬೆಳೆದುಬಂದಿದ್ದು, ಅವರಿಂದ ಸಮಾಜಕ್ಕೆ ಮತ್ತಷ್ಟು ಪ್ರಯೋಜನಗಳು ಲಭಿಸುವಂತಾಗಲಿಯೆಂದು ಆಶಿಸಿದರು.

ಒಂಭತ್ತುಕೆರೆ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ಶರಶ್ಚಂದ್ರ ಗಟ್ಟಿ ಸೋಮೇಶ್ವರ ಮಾತನಾಡಿ ಇಂತಹ ಸೇವಾ ಕಾರ್ಯಗಳಿಗೆ ಸಮಾಜವೇ ಬೆನ್ನೆಲುಬಾಗಿ ನಿಲ್ಲಬೇಕು. ಸಮಾಜದ ಪ್ರೋತ್ಸಾಹ ಲಭಿಸದ ಪರಿಣಾಮ ನವರಾತ್ರಿ ಉತ್ಸವದ ವೇಳೆ ಕಾಣ ಸಿಗುತ್ತಿದ್ದ ಅನೇಕ ಸಣ್ಣ ಪುಟ್ಟ ವೇಷಗಳು ಇಂದು ಮರೆಯಾಗಿವೆ. ಟೀಮ್ ಹನುಮಾನ್ ತಂಡದ ಉತ್ಸಾಹಿ ಯುವಕರು ಯಕ್ಷ ವೇಷ ಧರಿಸುವ ಮೂಲಕ ನಮ್ಮ ನೆಲದ ಸಂಸ್ಕೃತಿಯನ್ನ ಉಳಿಸಿ, ಬೆಳೆಸುವ ಕಾರ್ಯ ನಡೆಸುತ್ತಿದ್ದಾರೆಂದರು.
ಉಳ್ಳಾಲ ಬೈಲು ವೈದ್ಯನಾಥ ಕ್ಷೇತ್ರದ ಪ್ರಧಾನ ಅರ್ಚಕರಾದ ಮುಂಡ ಯಾನೆ ದಾಮೋದರ ಪೂಜಾರಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮನಗರದ ಟೀಮ್ ವಜ್ರ ತಂಡದ ಮಕ್ಕಳು ನವರಾತ್ರಿ ವೇಳೆ ವೇಷ ಹಾಕಿ ಕ್ರೋಢೀಕರಿಸಿದ ಹತ್ತು ಸಾವಿರ ರೂಪಾಯಿಗಳನ್ನು ನವ್ಯ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಧರ್ಮ ನಗರದ ನಿವಾಸಿ ಅನಾರೋಗ್ಯ ಪೀಡಿತ ಅರವಿಂದ್ ಅವರಿಗೆ ಟೀಮ್ ಹನುಮಾನ್ ವತಿಯಿಂದ ಸಹಾಯ ಧನ ನೀಡಲಾಯಿತು.

ಧರ್ಮನಗರ ಶ್ರೀ ರಾಹುಗುಳಿಗ ಬನದ ಪ್ರಧಾನ ಅರ್ಚಕರಾದ ಭಾಸ್ಕರ ತೆಂಗಿನ ಹಿತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಸತೀಶ್ ನಾಯ್ಕ ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಮಿತಾ ಅಶ್ವಿನ್, ಸಾಮಾಜಿಕ ಕಾರ್ಯಕರ್ತ ರಿಚರ್ಡ್ ವೇಗಸ್ ಅಂಗನವಾಡಿ ಸಹಕಾರ ಸಂಘದ ಅಧ್ಯಕ್ಷೆ ಶಕೀಲ, ಧರ್ಮನಗರ ನಾಗಬನ ಸೇವಾ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಧರ್ಮನಗರ, ಸುಂದರಿಭಾಗ್ ವೀರಾಂಜನೇಯ ವ್ಯಾಯಮ ಶಾಲೆಯ ಅಧ್ಯಕ್ಷರಾದ ನವನೀತ್ ಉಳ್ಳಾಲ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮೇಲ್ವಿಚಾರಕರಾದ ಆದರ್ಶ್, ಟೀಮ್ ಹನುಮಾನ್ ಅಧ್ಯಕ್ಷರಾದ ಸಂಪತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


Ads on article

Advertise in articles 1

advertising articles 2

Advertise under the article