ಖರ್ಗೋನ್: ನರ್ಮದಾ ನದಿ ತೀರದಲ್ಲಿ 343 ಮತದಾರರ ಗುರುತಿನ ಚೀಟಿಗಳು ಪತ್ತೆ.narmada river voters id locate
Monday, October 26, 2026
ಖರ್ಗೋನ್: ನರ್ಮದಾ ನದಿ ತೀರದಲ್ಲಿ 343 ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ಮಂಡಲೇಶ್ವರ ಪಟ್ಟಣದಲ್ಲಿ ಭಾನುವಾರ ಬೆಳಕಿಗೆ ಬಂದಿದ್ದು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಪತ್ತೆಯಾದ ಗುರುತಿನ ಚೀಟಿಗಳು ನೆರೆಯ ಇಂದೋರ್ ಜಿಲ್ಲೆಯ ರಾವು ವಿಧಾನಸಭಾ ಕ್ಷೇತ್ರಕ್ಕೆ ಸೇರಿದವು ಎನ್ನಲಾಗಿದೆ.
ನದಿಯ ದಂಡೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದ ವೇಳೆ ಸ್ಥಳೀಯ ನಿವಾಸಿಗಳಿಗೆ ಈ ಗುರುತಿನ ಚೀಟಿಗಳು ಸಿಕ್ಕಿದ್ದು, ತಕ್ಷಣವೇ ಅವರು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಸಿಕ್ಕಿರುವ ಮತದಾರರ ಗುರುತಿನ ಚೀಟಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರವಿ ನಾಯಕ್ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಮಂಡೇಶ್ವರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವಂತೆ ದೂರು ಸಲ್ಲಿಸಿದ್ದಾರೆ. ಈ ವೇಳೆ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿದ ನಾಯಕ್, ಈ ಕೃತ್ಯಕ್ಕೆ ಕಾರಣರಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಲ್ಲದೆ, ನದಿಯಲ್ಲಿ ಇನ್ನೂ ಹೆಚ್ಚಿನ ಮತದಾರರ ಗುರುತಿನ ಚೀಟಿಗಳು ಬಿದ್ದಿವೆಯೇ ಎಂದು ಪರಿಶೀಲಿಸಲು ಈಜುಗಾರರನ್ನು ಬಳಸಿ ಶೋಧ ಕಾರ್ಯಾಚರಣೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. "ಒಂದು ವೇಳೆ ಪೊಲೀಸರು ಎಫ್‌ಐಆರ್ ದಾಖಲಿಸದಿದ್ದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು" ಎಂದು ನಾಯಕ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಂಡೇಶ್ವರ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDOP) ಶ್ವೇತಾ ಶುಕ್ಲಾ, "ನರ್ಮದಾ ನದಿ ತೀರದ ಸ್ವಚ್ಛತಾ ಅಭಿಯಾನದ ವೇಳೆ ಈ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿವೆ. ಕಂದಾಯ ಇಲಾಖೆಯ ತಂಡವು ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದು, ಈ ವಿಷಯದ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಠಾಣಾಧಿಕಾರಿಗೆ ಸೂಚಿಸಲಾಗಿದೆ.
ಕಾಂಗ್ರೆಸ್‌ನಿಂದಲೂ ದೂರು ಸ್ವೀಕರಿಸಲಾಗಿದೆ'' ಎಂದು ತಿಳಿಸಿದಾರೆ.